ಒಂದು ಪುರಾತನ ಮರ
ಅಡಿಯಲ್ಲೊಬ್ಬ ಮುದುಕ
ಹೆಚ್ಚು ಅನುಭವಿ ಯಾರು ಹೇಳು ಇಬ್ಬರಲಿ.
ಕಾಲ ತಕ್ಕಡಿಯಲ್ಲಿ
ತೂಗುತಿವೆ ಕಾಳ್ಜೊಳ್ಳು
ಯಾರು ಸಾರ್ಥಕ ಜೀವಿ ಬಾಳಿನಂಚಿನಲಿ?
ಹಕ್ಕಿ ಸಂಕುಲಗಳಿಗೆ
ಅಳಿಲು ಗೊದ್ದ ಜೇನಿಗೆ
ಕಡಿವ ಮನುಜಗು ನೆರಳ ಕೊಟ್ಟ ಹೆಮ್ಮರವೆ?
ತುತ್ತು ಬಟ್ಟೆಯ ನೀಡಿ
ಮಕ್ಕಳಿಗೆ ನೆಲೆ ಮಾಡಿ
ಮುಕ್ತಿ ಹುಡುಕುತ ಹೊರಟ ಮುಗ್ಧ ಮುದಿಮನವೆ?
ಒಮ್ಮೆ ಹಸಿರು ಸೀರೆ
ಒಮ್ಮೆ ಬರೀ ಬೆತ್ತಲು
ಸೃಷ್ಟಿಯಾಜ್ಞೆಗೆ ಬದ್ದ ವೃಕ್ಷ ಪ್ರಬುದ್ಧವೆ?
ಅಷ್ಟ ಮದಗಳ ನುಂಗಿ
ಕಟ್ಟ ಕಡೆಗೂ ಮಾಗಿ
ಧ್ಯಾನ ಮೌನದಿ ಕುಳಿತ ವೃದ್ಧ ತಪಸ್ವಿಯೆ?
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ