ಮಂಗಳವಾರ, ಆಗಸ್ಟ್ 16, 2011

ಪಾಚಿ ಮತ್ತು ವೀಚಿ

ಹಸಿವ ತಿಂದ ಈ
ನಿನ್ನ ಮುದ್ದುಮುಖ
ತೊಳೆದ ಬೆಳ್ಳಿ ತಟ್ಟೆ
ನಿದಿರೆ ಕೊಂದ ಈ
ಅವಳಿ ಕಣ್ಣುಗಳು
ಗುಡಿಯ ಜೋಡಿ ದೀಪ

ಜೋಮು ಹಿಡಿಸಿ ಜ್ವರ
ತಂದ ಕೆಂಗೆನ್ನೆ
ಬಂಗಿ ಬೆಳೆವ ಗುಡ್ಡ
ಮತ್ತು ನೀಡಿ ನರ
ಜಗ್ಗಿದಂಥ ತುಟಿ
ನೀರ ಸುರಿವ ವೃಕ್ಷ

ನನ್ನ ಹೂತಿಟ್ಟ
ಗುಪ್ತ ಆತ್ಮಗುಹೆ
ದೋಣಿ ಇರದ ದ್ವೀಪ
ಒಡೆದ ಬಾಳಿನಲಿ
ನಮಗೆ ಸರಿತಾಳೆ
ಪಾಚಿ ಮತ್ತು ವೀಚಿ

ಭಾನುವಾರ, ಆಗಸ್ಟ್ 14, 2011

ಚಡ್ಡಿ ಅಂಗಿ

ಚಡ್ಡಿ ಅಂಗಿ ತಾ ತೊಟ್ಟು ಬರಲು ರವಿ
ನಿತ್ಯ ಸೂರ್ಯಗ್ರಹಣ
ಜರಿ ಷರಾಯಿ ಕರಿ ಕೋಟು ಧರಿಸೆ ಶಶಿ
ಶರಧಿಗೆಲ್ಲಿ ಪ್ರಣಯ

ಬೆಟ್ಟ ಜಲಪಾತ ಹೂವು ಮುಡಿದ ಬುವಿ
ಬೆತ್ತಲಲ್ಲೆ ಮಾನಿ
ಬಿಚ್ಚಿ ಗರಿಗಣ್ಣ ಕುಣಿವ ಆ ನವಿಲು
ವಸ್ತ್ರ ಬಯಸಲಿಲ್ಲ

ತನ್ನ ಸಹಜತೆಗೆ ತನಗೆ ಹೆಗ್ಗಳಿಕೆ
ಸೃಷ್ಟಿಯೋ ಪ್ರಬುದ್ದ
ಮುಚ್ಚಿಕೊಳುವ ಭ್ರಮೆಯಲ್ಲಿ ನರಜಂತು
ಮೂರು ಬಿಟ್ಟು ನಿಂತ