ಮಂಗಳವಾರ, ಜೂನ್ 7, 2011

ದಕ್ಕದ ತುತ್ತು

ಬಡವನುದರ ಬೆನ್ನಿಗೇರಿ ದೇಹ ಬರೀ ಚಕ್ಕಳ.
ನೋಡಬಹುದೆ ಅನ್ನವಿರದೆ ಸಾಯುತಿರುವ ಮಕ್ಕಳ.
ಹೊಟ್ಟೆ ಕಿಚ್ಚು ವ್ಯಾಪಿಸಿರಲು ಮಾನವತೆ ದಹಿಸಿದೆ
ಆರದಿದು ಎಷ್ಟೆ ಕಣ್ಣು ಅತ್ತರೂನು ಗಳಗಳ.
ಮಂದಿ ಮಂದಿ ಮುಕ್ಕಿ ತಿನುವ ದಾನವತೆನಿಲ್ಲಲಿ
ಒಂದೆ ಮನದಿ ಒರೆಸಬೇಕು ತೇವಗೊಂಡ ಕಂಗಳ.

ಮೂಟೆ ಮೂಟೆ ಕೊಳೆಯುತಿರಲು ಉಳ್ಳವರ ಮನೆಯಲಿ
ತಂಗಳನ್ನ ಕೂಡ ಕನಸು ದೀನರ ಗರಿಗೂಡಲಿ.
ಮುತ್ತು ರತ್ನ ಅಳೆದ ನಾಡು ನೋಡಿ ಈಗ ಹೇಗಿದೆ
ಸಾಮರಸ್ಯ ಸತ್ತು ಹೋಗಿ ತಾರತಮ್ಯ ಬೀಗಿದೆ.
ದರ್ಪ ದೌರ್ಜನ್ಯದ ವಿಷಸರ್ಪ ಹೆಡೆಯ ಹೆತ್ತಿದೆ
ಸಾವಿಗಂಜಿ ಬಡಸಮೂಹ ಗಂಜಿಗೆ ಹೋರಾಡಿದೆ.

ನೆಲವ ಸೀಳಿ ಬೀಜ ಬಿತ್ತಿ ಫಸಲು ಸಿಗದ ರೈತರು
ವಲಸೆ ಹೋಗಿ ನಗರಗಳಲಿ ಕೂಲಿಗಾಗಿ ಕಾದರು.
ಹಡೆದ ತಾಯಿ ಕೂಸಿಗಾಗಿ ಬಿಸಿಲಿನಲ್ಲಿ ದುಡಿದಳು
ಮೂಲೆಗಳಲ್ಲಿ ಹಾಲು ಇಲ್ಲ ಬೆವರ ಬುವಿಗೆ ಬಸಿದಳು.
ಅನ್ನ ಕೊಡದ ದೇವರೇಕೆ ಜನ್ಮ ಕೊಟ್ಟ ಕೇಳಿರಿ
ಕಲ್ಲು ಬಾಯ ತೆರೆವವರೆಗು ಕಣ್ಣು ಬಿಟ್ಟು ಕಾಯಿರಿ.

1 ಕಾಮೆಂಟ್‌:

  1. ಗುರುಗಳೇ ತುಂಬಾ ಚೆನ್ನಾಗಿದೆ ...ಈ ದಕ್ಕದ ತುತ್ತಿನ ಕೊನೆಯ ಪ್ಯಾರವನ್ನು ನಾನು ಕಾಪಿ ಮಾಡಿ

    ಫೇಸ್ ಬುಕ್ ಅಲ್ಲಿ ನಿಮ್ಮ ಅನುಮತಿ ಇಲ್ಲದೆ ಹಾಕಿದ್ದ್ದೇನೆ ..ತಪ್ಪಾಗಿದ್ದರೆ ಕ್ಷಮೆ ಇರಲಿ

    ಪ್ರತ್ಯುತ್ತರಅಳಿಸಿ