ಭಾನುವಾರ, ಜೂನ್ 26, 2011

ಅನುಭವಿ ಯಾರು?

ಒಂದು ಪುರಾತನ ಮರ 
ಅಡಿಯಲ್ಲೊಬ್ಬ ಮುದುಕ
ಹೆಚ್ಚು ಅನುಭವಿ ಯಾರು ಹೇಳು ಇಬ್ಬರಲಿ.
ಕಾಲ ತಕ್ಕಡಿಯಲ್ಲಿ 
ತೂಗುತಿವೆ ಕಾಳ್ಜೊಳ್ಳು
ಯಾರು ಸಾರ್ಥಕ ಜೀವಿ ಬಾಳಿನಂಚಿನಲಿ?

ಹಕ್ಕಿ ಸಂಕುಲಗಳಿಗೆ
ಅಳಿಲು ಗೊದ್ದ ಜೇನಿಗೆ
ಕಡಿವ ಮನುಜಗು ನೆರಳ ಕೊಟ್ಟ ಹೆಮ್ಮರವೆ?
ತುತ್ತು ಬಟ್ಟೆಯ ನೀಡಿ 
ಮಕ್ಕಳಿಗೆ ನೆಲೆ ಮಾಡಿ
ಮುಕ್ತಿ ಹುಡುಕುತ ಹೊರಟ ಮುಗ್ಧ ಮುದಿಮನವೆ?

ಒಮ್ಮೆ ಹಸಿರು ಸೀರೆ 
ಒಮ್ಮೆ ಬರೀ ಬೆತ್ತಲು 
ಸೃಷ್ಟಿಯಾಜ್ಞೆಗೆ ಬದ್ದ ವೃಕ್ಷ ಪ್ರಬುದ್ಧವೆ?
ಅಷ್ಟ ಮದಗಳ ನುಂಗಿ 
ಕಟ್ಟ ಕಡೆಗೂ ಮಾಗಿ 
ಧ್ಯಾನ ಮೌನದಿ ಕುಳಿತ ವೃದ್ಧ ತಪಸ್ವಿಯೆ?

ಶನಿವಾರ, ಜೂನ್ 11, 2011

ಪ್ರೀತಿ

ಜೋಡಿ ಜೀವಗಳ ಕೂಡಿ ಹಾಕುವ ಮಧ್ಯವರ್ತಿ
ಬೇಡವೆಂದರು ರೂಢಿಯಾಗುವ ನಿತ್ಯ ಕರ್ಮ
ಗೂಢವಾಗಿಯೆ ಗೂಡು ಕಟ್ಟುವ ಮೂಕ ಹಕ್ಕಿ
ಬಿಕ್ಕಳಿಸುವ ಪ್ರಾಣಪಕ್ಷಿಯ ವಿರಹಗಾನ

ಉಸಿರಿನಲ್ಲಿ ಬಸಿರ ತಳೆವ ಜೇಷ್ಠ ಭ್ರೂಣ
ಒಲಿದ ಜೀವವ ಕಾಯುವಂಥ ಕಾಳಸರ್ಪ
ವಿರಹದುರಿಯ ಕುಲುಮೆಯಲಿ ಕರಗುವ ಲೋಹ
ಮನದ ಮರದಲಿ ಹಸಿರ ಹರಡುವ ಹರಿತ್ತು

ಒಡಲ ಹುತ್ತದಲಿ ಬುಸುಗುಡುವ ಖುಷಿಯ ನಾಗ
ಹೃದಯ ನೇಸರ ಸುರಿಯುವಂಥ ಕನಸ ಕಿರಣ
ಬದುಕು ಬರೆವ ಮಧುರ ಕಾವ್ಯದ ಮೊದಲ ಪದ
ಧಮನಿಯೊಳಗಿನ ರಮಣಿ ನುಡಿಸುವ ಮಧುರ ಸ್ವರ

ಎದೆಯ ಚರಕ ನೇಯುವಂಥ ಮೃದುಲ ವಸ್ತ್ರ
ತಬ್ಬಲಿ ಹೃದಯವ ತಬ್ಬಿಕೊಳ್ಳುವ ಒಂಟಿ ನೆಂಟ
ಮೌನವಾಗಿ ಮನದಿ ಮೊರೆವ ಏರುದನಿ
ಸ್ಫೂರ್ತಿ ಕೊಳದಿ ಪೂರ್ತಿ ಅರಳಿದ ಕಮಲಕುಲ

ಜಿಹ್ವೆ ಜಿನುಗಿಸುವ ಜೀವದೆಂಜಲ ತೇವ
ಕಣ್ಣ ಹನಿಯಲಿ ಬೆಂದು ಕರಗುವ ಸುಣ್ಣ
ಹೇಳಲಾರದ ತಾಳಲಾರದ ಹೆರಿಗೆ ನೋವು
ಹೃದಯ ಶಿವನ ಹಾಳು ಮಾಡಿದ ಸುಂದರ ಶಾಪ

ಶುಕ್ರವಾರ, ಜೂನ್ 10, 2011

ಎಲಾ ಹೊಟ್ಟೆಯೇ

ಮೊದಲು ತಿಳಿ ತಿಳಿ ಹಾಲು
ಕ್ರಮೇಣ ಕೆನೆ ಕೆನೆ ಮೊಸರು
ಇದೀಗ
ರೊಟ್ಟಿಯ ಮೇಲಿನ ತುಪ್ಪ
ಇದಕೂ ಮೊದಲು ಮಜ್ಜಿಗೆಯೊಳಗಿನ ಬೆಣ್ಣೆ
ಎಲ್ಲದಕೂ ಮುಂಚೆ ಆಕಳ ಕೆಚ್ಚಲ ಖಂಡದೊಳಗಿನ
ರಕ್ತ.

ತೆಪ್ಪಗಿಳಿಯುತ್ತಿದೆ ತುಪ್ಪ
ಅನ್ನನಾಳದಿಕ್ಕೆಲಗಳ ಸವರುತ ತುತ್ತಿನೊಂದಿಗೆ.

ದಿಢೀರ್ ಬಿಕ್ಕಳಿಕೆ:
ಕ್ಷೀರ ಸಂಶೋಧಕ ನೆನೆದನೋ
ಅನ್ನದುತ್ಪಾಕ ಬೈದನೋ-
ನನಗಂತು ನೀರ್ಲೋಟ ನೆನಪಾಯಿತು.

ಅದೇಕೋ
ಅನಾದಿ ಕಾಲದ ಕಿಡಿಯೊಂದು
ಕೆಂಡವಾಗಿ,ನಿಗಿನಿಗಿ
ಜ್ವಾಲೆಯಾಗಿ,ತುಪ್ಪಕಾಗಿ
ಕಾಯುತ್ತಿರುವಂತೆ ಜಠರದುದ್ದಗಲ ನಾಲಿಗೆ ಚಾಚಿ.

ಅದೆಷ್ಟು ಖಂಡುಗ
ಬತ್ತ,ರಾಗಿ ಬೆಂದು ಹೋದವೋ ನನ್ನ ಹೊಟ್ಟೆಯಲ್ಲಿ
ಅದೆಷ್ಟು ಸಮುದ್ರ
ಅದೆಷ್ಟು ಕಾಯಿ ಸೊಪ್ಪು,ಅದೆಷ್ಟು
ಕೊಪ್ಪರಿಗೆ ತುಪ್ಪದೊಡನೆ!

ಎಲಾ
ಹೊಟ್ಟೆಯೇ...

ಮಂಗಳವಾರ, ಜೂನ್ 7, 2011

ದಕ್ಕದ ತುತ್ತು

ಬಡವನುದರ ಬೆನ್ನಿಗೇರಿ ದೇಹ ಬರೀ ಚಕ್ಕಳ.
ನೋಡಬಹುದೆ ಅನ್ನವಿರದೆ ಸಾಯುತಿರುವ ಮಕ್ಕಳ.
ಹೊಟ್ಟೆ ಕಿಚ್ಚು ವ್ಯಾಪಿಸಿರಲು ಮಾನವತೆ ದಹಿಸಿದೆ
ಆರದಿದು ಎಷ್ಟೆ ಕಣ್ಣು ಅತ್ತರೂನು ಗಳಗಳ.
ಮಂದಿ ಮಂದಿ ಮುಕ್ಕಿ ತಿನುವ ದಾನವತೆನಿಲ್ಲಲಿ
ಒಂದೆ ಮನದಿ ಒರೆಸಬೇಕು ತೇವಗೊಂಡ ಕಂಗಳ.

ಮೂಟೆ ಮೂಟೆ ಕೊಳೆಯುತಿರಲು ಉಳ್ಳವರ ಮನೆಯಲಿ
ತಂಗಳನ್ನ ಕೂಡ ಕನಸು ದೀನರ ಗರಿಗೂಡಲಿ.
ಮುತ್ತು ರತ್ನ ಅಳೆದ ನಾಡು ನೋಡಿ ಈಗ ಹೇಗಿದೆ
ಸಾಮರಸ್ಯ ಸತ್ತು ಹೋಗಿ ತಾರತಮ್ಯ ಬೀಗಿದೆ.
ದರ್ಪ ದೌರ್ಜನ್ಯದ ವಿಷಸರ್ಪ ಹೆಡೆಯ ಹೆತ್ತಿದೆ
ಸಾವಿಗಂಜಿ ಬಡಸಮೂಹ ಗಂಜಿಗೆ ಹೋರಾಡಿದೆ.

ನೆಲವ ಸೀಳಿ ಬೀಜ ಬಿತ್ತಿ ಫಸಲು ಸಿಗದ ರೈತರು
ವಲಸೆ ಹೋಗಿ ನಗರಗಳಲಿ ಕೂಲಿಗಾಗಿ ಕಾದರು.
ಹಡೆದ ತಾಯಿ ಕೂಸಿಗಾಗಿ ಬಿಸಿಲಿನಲ್ಲಿ ದುಡಿದಳು
ಮೂಲೆಗಳಲ್ಲಿ ಹಾಲು ಇಲ್ಲ ಬೆವರ ಬುವಿಗೆ ಬಸಿದಳು.
ಅನ್ನ ಕೊಡದ ದೇವರೇಕೆ ಜನ್ಮ ಕೊಟ್ಟ ಕೇಳಿರಿ
ಕಲ್ಲು ಬಾಯ ತೆರೆವವರೆಗು ಕಣ್ಣು ಬಿಟ್ಟು ಕಾಯಿರಿ.

ನಿಲ್ಲದ ಸ್ವಗತ

ಈ ಶೈಶವ ಈ ಬಾಲ್ಯ ಈ ಹರೆಯ ಈ ಮುಪ್ಪು
ಈ ಹುಟ್ಟು ಸಾವ ನಡುವೆ
ಈ ಕಾಮ ಈ ಕ್ರೋಧ ಈ ಲೋಭ ಈ ಮೋಹ
ಮದ ಮತ್ಸರಗಳ ಗೊಡವೆ

ಕೋಶಗಳ ಓದಿದರು ದೇಶಗಳ ಸುತ್ತಿದರು
ಪ್ರಶ್ನೆಗೆ ಇಲ್ಲ ಜವಾಬು
ಇದು ಸತ್ಯ ಇದು ಮಿಥ್ಯ ಇದು ನೇರ ಇದು ವಕ್ರ
ಬರಿದೆ ಸುಳ್ಳು ಸಬೂಬು

ಹೊಸತಿನ ಹುಡುಕಾಟದ ಭ್ರಮೆ ಬಲಗೊಂಡು ಬೆಳೆದಿರಲು
ವಾಸ್ತವದ ನೆಲೆಯ ಮರೆತು
ಅದೆ ಚಲನೆ ಅದೆ ತುಲನೆ ಬಿಡದಂತೆ ಸೆಳೆದಿಹುದು
ಪೂರ್ವಿಕರ ಹೆಜ್ಜೆ ಗುರುತು

ಬಹುಪಾಲು ಬದುಕನ್ನು ಕಡುನಿದ್ದೆ ನುಂಗಿರಲು
ಉಳಿದದ್ದು ಜಡತೆ ಪಾಲು
ದುಡಿಯುವುದು ಉಣ್ಣುವುದು ಉಣ್ಣುವುದು ದುಡಿಯುವುದು
ಬೇಕೆ ಯಾಂತ್ರಿಕತೆಯ ಬಾಳು

ಕತ್ತಲೆಯ ಮೇರೆಗಳು ನಡೆದಷ್ಟು ವಿಸ್ತಾರ
ಎಲ್ಲಿರುವುದು ಹೊಸಬೆಳಕು
ಹೃದಯದ ಸದ್ಗುಹೆಯೊಳಗೆ ತಪಗೈವ ಪರಮಾತ್ಮ
ಮಾತಾಡು ಮೌನ ಸಾಕು

ಶನಿವಾರ, ಜೂನ್ 4, 2011

ಕೆದಕಿದಷ್ಟು ನೀರು ಮಲಿನ

ಜೀವಜೀವದಾಳದಲ್ಲು
ಸದ್ವಿಶಾಲ ಬಾನು
ಆಲದಲಿರುವಂತೆ ಹಲವು
ಬಿಳಲುಗಳ ಕಣ್ಣು

ಸತ್ಯ ಒಂದು ಕೋನ ನೂರು
ಗ್ರಹಿಕೆಗರ್ಥ ಬೇಡ
ಸೃಷ್ಟಿ ಎಂಬ ಮನೆಯ ತುಂಬ
ಜಿಜ್ಞಾಸೆಯ ಜೇಡ

ಸುಪ್ತ ಮನದ ಗುಪ್ತ ವಿಷಯ
ಪಾಚಿಯಡಿಯ ನೀರು
ಏಕೆ ಕೆಸರಿನುಸಾಬರಿ
ಹೂವಿಗೆ ಹೊಣೆ ಯಾರು

ಚಿತ್ತ ಭಿತ್ತಿ ಮೇಲನೇಕ
ಬಣ್ಣ ಬಣ್ಣ ಬಣ್ಣ
ತಿಕ್ಕಿ ನೋಡಿದಾಗ ಬಯಲು
ಬಣ್ಣದಡಿಯ ಸುಣ್ಣ

ಕೆದಕಿದಷ್ಟು ನೀರು ಮಲಿನ
ನೋಡು ಮಿನುಗು ಮೀನು
ಪ್ರಶ್ನೆಗಳಪಹಾಸ್ಯದೆದುರು
ನಾನು ನೀನು ಅವನು

ಶುಕ್ರವಾರ, ಜೂನ್ 3, 2011

ಅವಳ ಕನಸು

ನೆತ್ತಿಗೆ ರವಿ ಕೊಳ್ಳಿಯಿಡಲು
ಪಾದದಡಿಗೆ ಕಾದ ಮರಳು
ನಾನು ಮತ್ತು ನನ್ನ ನೆರಳು
ಸಾಗುತಿದ್ದೆವೆಲ್ಲಿಗೆ ?
ಅವನು ಯಾರೊ ಓಡಿ ಬಂದ
ಬೊಗಸೆ ತುಂಬ ನೀರು ತಂದ
ಮುಖಕೆ ಎರಚಿ ಕಾಣೆಯಾದ
ಹೆಸರಿಡಿ ಈ ನಂಟಿಗೆ !

ಅವನ ಹೆಜ್ಜೆ ಗುರುತು ಹಿಡಿದು
ನಡೆದೆವು ಹಂಬಲವ ತಳೆದು
ಕುಶಲ ಕಸುಬು ಕೇಳಲೆಂದು
ಹೊಸತು ಅರ್ಥ ಯಾತ್ರೆಗೆ !
ಸಾಗಿದಷ್ಟು ದಾರಿ ದೂರ
ಹೇಳಿ ಕೇಳಿ ಮಹಾ ಸಹರ
ಕೊನೆಗು ಸಿಗಲೆ ಇಲ್ಲ ಚತುರ
ಪರದೆ ಸರಿದ ಕನಸಿಗೆ !

ಬುಧವಾರ, ಜೂನ್ 1, 2011

ಹೆಣ್ಣು ಮತ್ತು ಬಟ್ಟೆ

ಲಜ್ಜೆಗೆಟ್ಟ ನಾಲಿಗೆಯಿಂದ
ದೂರಿದರೆ ನಿನ್ನ ಮೈಯಿಂದ
ಒಂದೆಳೆಯೂ ಬೇರ್ಪಡುವುದಿಲ್ಲ.ಕೊನೆಗೂ
ತಿಳಿಯಲಿಲ್ಲ ನಿನ್ನ ಲಿಂಗ.

ನೂಲಿಗೆ ನೂಲು,ಬಣ್ಣದ ಕಸೂತಿ-
ನಿನ್ನದು ಅಪ್ಪಟ ರಸಿಕನಪ್ಪುಗೆ
ಮೊಲೆಯಾದಿ ತೊಡೆ ನಿತಂಬ
ಬಳಸಿ ನಿಲ್ಲುವ ನೀನು ವಿಚಿತ್ರ ಸ್ಪರ್ಶಸುಖಿ.

ಪುಂಡರ,ತರುಣರ ಇಲ್ಲವೇ ಚಪಲಗಣ್ಣುಗಳಿಂದ
ತಪ್ಪಿಸಿಕೊಳ್ಳುವುದು ಸುಲಭ. ಮಾನ ಮುಚ್ಚಿಕೊಳ್ಳುವ ಯತ್ನದಲ್ಲಿ
ನಿನಗೆ ನಿತ್ಯ ಬೆತ್ತಲ ದರ್ಶನ-ನೋಟು ನೋಟು ಕೂಡಿಟ್ಟು
ಗೆದ್ದಲಿಗೆ ಉಣಬಡಿಸುವ ರೀತಿ.

ಅಕ್ಕಮಹಾದೇವಿ ನಾನಲ್ಲವೆಂದು ಬಲ್ಲೆ,ಗೇಣುದ್ದದೀ ಮುಡಿ
ಮುಚ್ಚದು ನನ್ನಿಡೀ ಮೈಯ.
ಕಿತ್ತು ಕಡ್ಡಿ ಗೀರಿ ಸುಟ್ಟರೂ ನೋಡುಗಣ್ಣ
ಕಲ್ಪನೆಯ ದೃಷ್ಟಿ ಎಂದಿಗೂ ಅನಂತ.

ಬಚ್ಚಲ ಹಬೆಯಲ್ಲಿ ರೋಮಾಂಚನಗೊಂಡ
ಅನುಭವವಿದೆ.ಬಿಸಿ ಬಿಂದು ಹಣೆಯಿಂದಿಳಿದು
ಮೂಗಿನ ತುದಿಯಾಚೆ ಧುಮುಕಿ ಹೊಕ್ಕಳವರೆಗೆ
ಜಾರುವುದ ಕಂಡಿದ್ದೇನೆ.
ಕ್ಷಣದಲ್ಲಿ ನನ್ನ ಆವರಿಸುವ ಈ ಬಟ್ಟೆ-
ನನ್ನುಬ್ಬು ತಗ್ಗುಗಳನ್ನು ಬಲ್ಲ ಮಹಾ ಮಾಂತ್ರಿಕ.

ಸೋಕಿದ ಮಾತ್ರಕ್ಕೆ ಸೋತೆನೆನ್ನದಿರು,ಮರೆತುಬಿಡು
ಆ ಬೆವರ ಕಮಟು ಸ್ವಾದವನ್ನ.
ಮಾತು ತಪ್ಪಿದರೆ,ಇದಂತೂ ನಿಜ,ನೀನು
ನನಗೆಸಗುವ ವಿಶ್ವಾಸ ದ್ರೋಹ.

ಲೋಕದೆದುರು
ಬೆತ್ತಲಾದರೂ ಚಿಂತೆಯಿಲ್ಲ ಕಡೆಗೆ.
ನಿನ್ನ ಕಣ್ಣುಗಳಿಗೆ ಸೂಜಿಯನ್ನು ಚುಚ್ಚಿ
ಸಂಪೂರ್ಣ ನೂಲು ನೂಲು ಮಾಡದಿರಲಾರೆ.