ಸೋಮವಾರ, ಮಾರ್ಚ್ 19, 2012

"ಬೆಟ್ಟದ ಮೇಲೊಂದು ಮಧುಚಂದ್ರ"

'ದಲಿತ ಕವಿಯ ಹರಿತ ಲೇಖನಿ!'

ಇಕ್ರಲಾ ವದೀರ‍್ಲಾ ಈ ಸೂಳೇ ಮಕ್ಳ ಮೂಳೇ ಮುರೀರ‍್ಲಾ ಎಂದು ಎಪ್ಪತ್ತರ ದಶಕದಲ್ಲಿ ಆರ್ಭಟಿಸಲು ಶುರುವಿಕ್ಕಿಕೊಂಡ ಡಾ|| ಸಿದ್ಧಲಿಂಗಯ್ಯನವರು ಕರ್ನಾಟಕದ ದಲಿತರ ಪಾಲಿಗೆ ಅಭಿನವ ಅಂಬೇಡ್ಕರ್ ಆದಂಥವರು. ತಮ್ಮ ಹರಿತವಾದ ಲೇಖನಿಯಿಂದ ಸರ್ವನೀಯರ ಸೊಕ್ಕು ಮುರಿಯಲು ನಿರಂತರವಾಗಿ ಹೋರಾಡಿದಂತವರು. ರಾಜ್ಯಾದ್ಯಂತ ಎಲ್ಲಿಯೇ ದಲಿತಪರ ಹೋರಾಟ, ಚಳುವಳಿ, ಮೆರವಣಿಗೆಗಳು ನಡೆದರೂ ಅಲ್ಲಿ ಸಿದ್ಧಲಿಂಗಯ್ಯನವರ ಕ್ರಾಂತಿ ಗೀತೆಗಳು ಮುಗಿಲು ಮುಟ್ಟುತ್ತಿದ್ದವು, ಇಂದಿಗೂ ಮುಟ್ಟುತ್ತಿವೆ.

ಹಿಂದೂ ಸಮಾಜದಲ್ಲಿನ ಹುಳುಕುಗಳನ್ನು ಎತ್ತಿ ಹಿಡಿದು ದಲಿತರ ಮೇಲೆ ಆಗುತ್ತಿದ್ದ ದೌರ್ಜನ್ಯವನ್ನು ಧಿಕ್ಕರಿಸಿ ನಿಂತ ಎದಗಾರಿಕೆ ಇವರ ಕೃತಿಗಳಿಗಿದೆ. ನಮ್ಮ ಪರಂಪರೆ, ಜಾತೀಯತೆ, ಮೇಲು ಕೀಳಿನ ತಾರತಮ್ಯ, ಮೇಲ್ವರ್ಗದವರ ದರ್ಪ, ಆತ್ಮಾನುಕಂಪ ಮತ್ತು ಅಕ್ರೋಶಗಳ ಎರಡು ಅತಿಗಳಲ್ಲಿ ತುಯ್ಯಲಾಡುತ್ತಿದ್ದ ಮನೋ ರಾಜಕೀಯ ಸ್ಥಿತಿ, ಚರಿತ್ರೆಯ ವಿಕಾಸ ಪಥದಲ್ಲಿ ಆಧುನೀಕರಣ ತಮ್ಮ ಬಿಡುಗಡೆಯ ಏಕಮಾತ್ರ ದಾರಿಯೆಂಬ ಆಶಾವಾದ. ಆದ್ದರಿಂದ ಆಧುನೀಕರಣಕ್ಕಿಂತ ಹೆಚ್ಚಾಗಿ ಹಿಂದಿನವರ ದಬ್ಬಾಳಿಕೆಯ ಮೇಲಿನ ಬಗ್ಗೆ ಧಗಧಗಿಸುವ ಸಿಟ್ಟು - ಈ ಬಗೆಯ ವೈಚಾರಿಕ ಆಕೃತಿಗಳು ಕೇವಲ ಕಾರ್ಯಕ್ಕೆ ಸೀಮಿತವಾಗಿರಲಿಲ್ಲ. ಬದಲಿಗೆ, ೭೦-೮೦ ರ ದಶಕಗಳಲ್ಲಿ ದಲಿತ ಚಳುವಳಿಗಳು ಗಟ್ಟಿಗೊಳ್ಳಲು ಕಾರಣೀಭೂತವಾಗಿದ್ದವು. ಅಂಬೇಡ್ಕರ್ ರವರ ವಿಚಾರ, ಚಿಂತನೆಗಳು, ಸಿದ್ಧಲಿಂಗಯ್ಯನವರ ಮೇಲೆ ಎಷ್ಟು ಪ್ರಭಾವ ಬೀರಿದ್ದವು ಎನ್ನುವ ಪ್ರಶ್ನೆಗೆ ಅವರ ಕೃತಿಗಳೇ ಉತ್ತರ ನೀಡುತ್ತವೆ.

ಹೊಲೆಮಾದಿಗರ ಹಾಡು, ಸಾವಿರಾರು ನದಿಗಳು, ಕಪ್ಪು ಕಾಡಿನ ಹಾಡು, ಕುಸುಮ ಬಾಲೆ, ಅವತಾರಗಳು, ಹೊಸ ಕವಿತೆಗಳು - ಇವು ಕವಿ ಸಿದ್ಧಲಿಂಗಯ್ಯನವರ ಸಾಮರ್ಥ್ಯವನ್ನು ಸಾರುವಂತಹ ಕೃತಿಗಳು. ಸಾಹಿತ್ಯ ಕೃಷಿಯ ಜೊತೆ ಜೊತೆಗೆ ರಾಜಕೀಯದಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡ ಕವಿ ದೀನರ ದನಿಯಾಗಲು ಶತಾಯ ಗತಾಯ ಪ್ರಯತ್ನಿಸಿದರು. ಅವರು ಸದನದಲ್ಲಿ ಮಾಡಿದ ಭಾಷಣಗಳ ಸಂಗ್ರಹವು ಪುಸ್ತಕ ರೂಪದಲ್ಲಿ ಲಭ್ಯವಿದ್ದು, ಜನಪ್ರಿಯತೆ ಗಳಿಸಿದೆ. ಇಂತಹ ಅಪರೂಪದ ಕವಿಯು ೧೯೮೩ ರಲ್ಲಿ ಪ್ರಕಟಿಸಿದ ಕಪ್ಪು ಕಾಡಿನ ಹಾಡು ಕವನ ಸಂಕಲನದಲ್ಲಿನ ಸುಟ್ಟಾವು ಬೆಳ್ಳಿಕಿರಣ ಗೀತೆಯು ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶಿಸಿ, ಶಿವರಾಮ ನಟಿಸಿದ ಬಾನಲ್ಲೆ ಮಧುಚಂದ್ರಕೆ ಚಿತ್ರದಲ್ಲಿ ಚಿತ್ರಗೀತೆಯಾಗಿ ಬಳಕೆಯಾಗಿ ಜನಮಾನಸದಲ್ಲಿ ನೆಲೆನಿಂತ ವಿಚಾರ ಖುಷಿ ತರುತ್ತದೆ. ಹಂಸಲೇಖ ಸಂಗೀತ ಸಂಯೋಜನೆಯಲ್ಲಿ ಡಾ|| ಎಸ್. ಪಿ. ಬಾಲಸುಬ್ರಮಣ್ಯಂ ಹಾಡಿರುವ ಈ ಗೀತೆ ಇಂದಿಗೂ ಕೇಳುಗರ ಮನಸಿನಲ್ಲಿ ತಣ್ಣನೆಯ ಆಹ್ಲಾದವನ್ನು ತರುವಂತಹ ಗುಣ ಹೊಂದಿದೆ.

'ನಾಗತಿಹಳ್ಳಿಯ ಸಾಹಿತ್ಯ ಪ್ರೇಮ'


ಮೂಲತಃ ಸಾಹಿತಿಯಾಗಿರುವ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ರವರು ತಮ್ಮ ಚಿತ್ರಗಳಲ್ಲಿಯೂ ಸಾಹಿತ್ಯದ ಸಾರವನ್ನು ಧಾರಾಳವಾಗಿ ಹರಿಸುತ್ತಿರುವ ಕ್ರಿಯಾಶೀಲ ವ್ಯಕ್ತಿ. ಲೇಖಕ, ಅಂಕಣಕಾರ, ಅಧ್ಯಾಪಕ - ಹೀಗೆ ನಾನಾ ಅಪತಾರಗಳನ್ನು ಎತ್ತಿ ತಮ್ಮ ಛಾಪನ್ನು ಮೂಡಿಸಿದಂತಹ ನಾಗತಿಹಳ್ಳಿ ಚಿತ್ರ ನಿರ್ದೇಶಕರಾಗಿಯೂ ತಮ್ಮದೇ ವಿಶಿಷ್ಟವಾದ ಸ್ಥಾನವನ್ನು ಅಲಂಕರಿಸಿದಂತಹ ಸೃಜನಶೀಲ ನಿರ್ದೇಶಕ. ತಮ್ಮ ಚಿತ್ರದ ಕತೆಯಾಗಿರಬಹುದು, ಸಾರಾಗವಾಗಿ ಬಿಚ್ಚಿಕೊಳ್ಳುವ ಚಿತ್ರಕತೆಯಾಗಿರಬಹುದು, ಸಹಜವಾದ ಸಂಭಾಷಣೆ ಇರಬಹುದು, ನಮ್ಮ ಮಣ್ಣಿನ ಸೊಗಡುಳ್ಳ ಗೀತ ಸಾಹಿತ್ಯವಿರಬಹುದು, ಪಾತ್ರಗಳ ಸೃಷ್ಟಿ, ಅವುಗಳ ಅಭಿವ್ಯಕ್ತಿ - ಎಲ್ಲದರಲ್ಲೂ ನಾಗತಿಹಳ್ಳಿ ತಮ್ಮತನವನ್ನು ತೋರಿಸಬಲ್ಲರು. ಪೂರ್ವಭಾವಿಯಾಗಿ ಯಾವುದೇ ನಿರ್ದೇಶಕರ ಕೈ ಕೆಳಗೆ ಕೆಲಸ ಮಾಡದೆ ನಂತರ ನೇರವಾಗಿ ಚಿತ್ರ ನಿರ್ದೇಶನಕ್ಕೆ ಇಳಿದ ಇವರಿಗೆ ಸಾಥ್ ನೀಡಿದ್ದು ಅವರ ಓದು ಮತ್ತು ಜೀವನಾನುಭವ. ಉಂಡು ಹೋದ ಕೊಂಡು ಹೋದ ಚಿತ್ರದಿಂದ ಹಿಡಿದು ಇತ್ತೀಚಿನ ಒಲವೇ ಜೀವನ ಲೆಕ್ಕಾಚಾರದ ತನಕ ನಾಗತಿಹಳ್ಳಿ ನಾಗತಿಹಳ್ಳಿಯಾಗಿಯೇ ಕಾಣುತ್ತಾರೆ. ಯಾರ ಪ್ರಭಾವಕ್ಕೂ ಒಳಗಾಗದೆ ತಮ್ಮ ನಿರ್ದಿಷ್ಟ ಜಾಡಿನಲ್ಲಿಯೇ ಸಾಗುತ್ತಿದ್ದಾರೆ. ಗಂಭೀರವಾದ ಕಥಾವಸ್ತುವನ್ನು ಚಿತ್ರಕತೆಯಾಗಿಸುವ ಸಂದರ್ಭದಲ್ಲಿ ಲಘು ಹಾಸ್ಯ ಬೆರೆಸಿ ಪ್ರೆಸಂಟ್ ಮಾಡುವ ಶೈಲಿ ನಿಜಕ್ಕೂ ಶಾಘ್ಲನೀಯ. ಆಗಾಧ ಗುಣಮಟ್ಟ ಇರುವ ಕನ್ನಡ ಸಾಹಿತ್ಯವನ್ನು ಅವರು ಗೌರವಿಸುತ್ತಾರೆ ಎನ್ನುವುದರಲ್ಲಿ ಸಂಶಯವಿಲ್ಲ. ಅವರು ರಚಿಸಿದ ಗೀತೆಗಳೇ ಅದಕ್ಕೆ ನಿದರ್ಶನ. ಇಂತಹ ಉತ್ತಮ ಹಿನ್ನೆಲೆ ಇರುವ ನಾಗತಿಹಳ್ಳಿ ಚಂದ್ರಶೇಖರ್‌ರವರು ತಮ್ಮ ನಿರ್ದೇಶನದ ಬಾನಲ್ಲೆ ಮಧುಚಂದ್ರಕೆ ಚಿತ್ರದಲ್ಲಿ ಡಾ|| ಸಿದ್ಧಲಿಂಗಯ್ಯ ರಚಿಸಿದ ಸುಟ್ಟಾವು ಬೆಳ್ಳಿಕಿರಣ ಗೀತೆಯನ್ನು ಅಳವಡಿಸಿಕೊಂಡಿರುವ ಅಂಶ ಅವರಿಗೆ ಇರುವ ಸಾಹಿತ್ಯ ಪ್ರೇಮ ಹಾಗೂ ಕವಿಗಳ ಮೇಲಿನ ಗೌರವವನ್ನು ತೋರಿಸುತ್ತದೆ. ಸ್ವತಹ ತಾವು ಪ್ರತಿಭಾವಂತ ಸಾಹಿತಿ ಆಗಿದ್ದರೂ ಕೂಡಾ ಹಂಸಲೇಖರವರು ಆ ಗೀತೆಗೆ ಸಂಗೀತ ಸಂಯೋಜನೆ ಮಾಡಿರುವುದು ನಿಜಕ್ಕೂ ಆರೋಗ್ಯಕರ ಸಂಗಂತಿ.

'ಸಿದ್ಧಲಿಂಗಯ್ಯನವರ ಗೆಳತಿ'


ದಲಿತ ಕವಿ ಎಂದೇ ಖ್ಯಾತರಾಗಿರುವ ಸಿದ್ಧಲಿಂಗಯ್ಯನವರು ಪ್ರೇಮ ಗೀತೆಗಳನ್ನು ಬರೆದಿದ್ದಾರೆ ಎಂದರೆ ನಿಮಗೆ ಅಚ್ಚರಿಯಾಗದಿರದು. ಹೌದು, ಸಿದ್ಧಲಿಂಗಯ್ಯನವರು ಕೇವಲ ಕ್ರಾಂತಿ ಕವಿ ಅಲ್ಲ. ಅವರೊಳಗೊಬ್ಬ ಶಾಂತಿ ಪ್ರಿಯ, ಸೂಕ್ಷ್ಮ ಮನಸ್ವಿ ಖಂಡಿತ ಇದ್ದಾನೆ. ತಾವು ರಚನೆಗೆ ತೊಡಗಿದಾಗ ತನ್ನ ಸುತ್ತಮುತ್ತಲಿನ ಸಮಾಜದ ಹುಳುಕುಗಳು, ಮೇಲ್ವರ್ಗದಿಂದ ಕೆಳವರ್ಗದವರಿಗೆ ಆಗುವ ದೌರ್ಜನ್ಯಗಳು, ಜಾತೀಯತೆ - ಹೀಗೆ ತಮ್ಮನ್ನು ನಿತ್ಯವೂ ಕಾಡುತ್ತಿದ್ದ ಜಿಜ್ಞಾಸೆಗಳಿಗೆ ಅಕ್ಷರ ರೂಪ ಕೊಡಲು ಮುಂದಾದಾಗ ಕ್ರಾಂತಿ ಗೀತೆಗಳು ಸಹಜವಾಗಿ ಹುಟ್ಟಿಕೊಂಡವು. ಕವಿಯ ಮನಸಿನಲ್ಲಿ ಮೌನವಾಗಿ ಅಡಗಿದ್ದ ಪ್ರತಿಭಟನೆಯ ಕಿಡಿಗಳು ಹಾಡುಗಳಾಗಿ ಹೊರಬಂದವು. ವಿಚಾರ ಕ್ರಾಂತಿಗೆ, ಬಂಡಾಯ ಸಾಹಿತ್ಯಕ್ಕೆ ಹೊಸ ಆಯಾಮ ಒದಗಿಸಿ ಕೊಟ್ಟರು. ಆದರೆ ಸಿದ್ಧಲಿಂಗಯ್ಯನವರೊಳಗೆ ಒಬ್ಬ ಮೃದುವಾದ ಕವಿ ಇದ್ದಾನೆ. ಸೂಕ್ಷ್ಮ ಸಂವೇದನೆ, ಆರ್ಧ್ರತೆ, ಮಾನವೀಯತೆ, ಸವಿ ಸ್ಪಂದನೆ - ಹೀಗೆ ಒಬ್ಬ ಕವಿಗಿರಬೇಕಾದ ಎಲ್ಲಾ ಗುಣಗಳು ಇರುವುದರಿಂದಲೇ ಸುಟ್ಟಾವು ಬೆಳ್ಳಿಕಿರಣ ಎಂಬ ಅದ್ಭುತ, ಅನುಪಮ ಗೀತೆ ಹುಟ್ಟಿ ಬರಲು ಸಾಧ್ಯವಾಯಿತು. ಕವಿ ತನ್ನ ಗೆಳತಿಯ ಮೇಲೆ ಎಷ್ಟು ಪ್ರೀತಿಯನ್ನು ಇಟ್ಟಿರುತ್ತಾನೆ ಎಂಬ ನಿಗೂಢವಾದ ಸತ್ಯ ಈ ಕವಿತೆಯ ಸಾಲುಗಳಲ್ಲಿ ಹಂತ ಹಂತವಾಗಿ ಬಿಚ್ಚಿಕೊಳ್ಳುತ್ತಾ ಹೋಗುತ್ತವೆ.

ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ ಸುಳಿದಾಡ ಬೇಡ ಗೆಳತಿ ಎಂದು ಮೊದಲಾಗುವ ಈ ಗೀತೆಯ ಸಾಲಿನಲ್ಲಿ ಕವಿ ತನ್ನ ಪ್ರೀತಿಯ ತೀವ್ರತೆಯನ್ನು ಹೇಳ ಹೊರಟಿದ್ದಾನೆ. ಚೆಲುವಾದ ನಿನ್ನ ಮಲ್ಲಿಗೆಯ ಮೈಯ ಸುಟ್ಟಾವು ಬೆಳ್ಳಿಕಿರಣ ಎಂದು ಮುಂದುವರೆಸುತ್ತಾ ತನ್ನ ಗೆಳತಿಯ ಕೋಮಲವಾದ ಮೈಯನ್ನು ಬೆಳ್ಳಿಕಿರಣವು ಕೂಡ ಸುಡಬಹುದು ಎನ್ನುವ ಆತಂಕ ಕವಿಯನ್ನು ಕಾಡುತ್ತಿದೆ. ಹಾಗೆ ಮುಂದುವರೆದರೆ ಇಳಿಜಾರಿನಲ್ಲಿ ಇಳಿಯಬೇಡ, ಅಲ್ಲಿ ಮೊಲದ ಹಿಂಡುಗಳು ನಿನ್ನ ಪಾದವನ್ನು ಮುತ್ತಿಕೊಳ್ಳುತ್ತವೆ. ಹಾಗೆ ಮುತ್ತಿಕೊಂಡರೆ ತನ್ನಿಂದ ಸಹಿಸಿಕೊಳ್ಳಲಾಗದು ಎಂದು ಸಹ ವಿನಂತಿಸಿಕೊಳ್ಳುತ್ತಾನೆ.

ಆ ಊರ ಬನದಲ್ಲಿ ನೀನು ಒಂಟಿ ಹೂವಾಗಿ ಅರಳಬೇಡ, ಹಾಗೊಂದು ಅರಳಿದರೆ ಅಲ್ಲಿರುವ ದುಂಬಿಗಳ ಧಾಳಿಗೆ ನೀನು ಸಿಲುಕಬೇಕಾಗುತ್ತದೆ ಎಂದು ಹೇಳುತ್ತಾನೆ. ಒಂಟಿ ಹೂವಾಗಿ ಎಂಬ ಮಾತಿನಲ್ಲಿ ಕವಿಯು ತನ್ನವಳು ಮಾತ್ರ ರೂಪಸಿ, ತನ್ನ ರೂಪವತಿಯ ಎದುರು ಇತರ ಹುಡುಗಿಯರೆಲ್ಲರು ಸುಂದರಿಯರಲ್ಲ ಎಂಬ ಉದ್ದೇಶವನ್ನು ವ್ಯಕ್ತಪಡಿಸಿರಬಹುದೇ ನಾವೇ ಊಹಿಸಿಕೊಳ್ಳೋಣ. ಅಂದು ನೀನು ನನ್ನೆದೆಯ ತೋಟದಲ್ಲಿ ನೆಟ್ಟ ಒಲವಿನ ಬಳ್ಳಿ ಹೂ ಬಿಟ್ಟಿರುವುದೆ? ಫಲ ಕೊಟ್ಟಿರುವುದೆ? ಎಂದು ಪ್ರಶ್ನಿಸುವ ಮುಖಾಂತರ ನಾನು ಪ್ರೀತಿಸುವಷ್ಟೇ ಪ್ರಮಾಣದಲ್ಲಿ ನೀನು ನನ್ನನ್ನು ಪ್ರೀತಿಸುತ್ತಿರುವೆಯಾ ಎಂದು ಪ್ರಶ್ನೆ ಮಾಡುತ್ತಾನೆ. ಇದರ ಒಳಾರ್ಥ ಪ್ರೇಮಿಯೊಬ್ಬ ತನ್ನ ಸಂಗಾತಿಯಿಂದ ನಿರೀಕ್ಷಿಸುವ ಪ್ರೀತಿಯ ಪ್ರಮಾಣ ಎಷ್ಟು ಇರುತ್ತವೆ ಎಂಬ ಅಂಶ ಇಲ್ಲಿ ಇಣುಕುತ್ತದೆ.

ನಿನ್ನಂತರಂಗದಲ್ಲೊಂದು ನೋವು ನಾನಾಗಿ ನಿಂತುಬಿಟ್ಟೆ, ನೀನೊಪ್ಪಿಕೊಂಡ ಚಂದಿರನ ಕಣ್ಣ ಬೆಳಕಾಗಿ ಕೂಡಿಕೊಂಡೆ ಎಂದು ಮುಂದುವರಿಸುತ್ತಾ ಕವಿ ಕೆಲವು ಗೂಢಾರ್ಥಗಳನ್ನು ಹೇಳಬಯಸುತ್ತಾನೆ. ಪ್ರೀತಿ ಎಂಬುದು ಹಿತವಾದ ನೋವು, ಸಿಹಿಯಾದ ಹಿಂಸೆ, ಮುಗಿಯದ ಯಾತನೆ, ತೀರದ ಯಾಚನೆ - ಹೀಗೆ ತಮ್ಮದೇ ರೀತಿಯಲ್ಲಿ ಪ್ರಸ್ತಾಪಿಸಿರಬಹುದೇ ಎಂದು ನಾವು ಕಲ್ಪಿಸಿಕೊಳ್ಳಬಹುದು. ನೀನಿತ್ತ ಒಲವು, ನಾನಿತ್ತ ವಿಷವು ಒಂದಾಗಲಾರವೆಂದು, ನೀ ಕೊಟ್ಟ ಜೀವ ನಾ ಕೊಟ್ಟ ಸಾವು ಸಮಾನಾಗಬಹುದೇ ಗೆಳತಿ ಎಂದು ಕೂಡಾ ಪ್ರಶ್ನಿಸುತ್ತಾನೆ. ತನ್ನವಳು ಕೊಟ್ಟ ಒಲವಿಗೆ ಬದಲಾಗಿ ತಾನು ಕೊಟ್ಟಂತಹ ಉಡುಗೊರೆ ವಿಷ ಎಂಬ ಸತ್ಯವನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುತ್ತಾನೆ. ನೀನು ಜೀವ ಕೊಟ್ಟರೆ ನಾನು ಸಾವು ಕೊಟ್ಟೆ ಇವು ಸಮಾನಾಗಬಹುದೆ ಗೆಳತಿ ಎಂದು ಹೇಳುವಾಗ ಕವಿಯ ಭಾವ ತೀವ್ರತೆ ಎಷ್ಟಿತ್ತು ಎಂದು ಯೋಚನೆ ಮಾಡಬೇಕು. ಕಂಡಂಥ ಕನಸು ಫಲಿಸಿತ್ತೆ ಗೆಳತಿ ಕನಸಿತ್ತು ಕಡಲಿನಲ್ಲಿ, ತೆಂಗು ತಾರೆಗಳ ಸಂಗಮವು ಮುಗಿದು ಮನಸಿತ್ತು ಮುಗಿಲಿನಲ್ಲಿ ಎಂದು ಗೀತೆಗೊಂದು ಸಮಾಪ್ತಿ ಹೇಳುತ್ತಾನೆ ಕವಿ. ತಾವು ಕಂಡಂತಹ ಕನಸು ನಿಜವಾಗಿಯೂ ನನಸಾಯಿತೇ? ಅಥವಾ ಇಲ್ಲವೇ? ಎಂದು ಪ್ರಶ್ನೆ ಮಾಡುವುದರ ಮೂಲಕ ತನ್ನೊಳಗಿನ ಗೊಂದಲವನ್ನು ಸಾಬೀತುಪಡಿಸುತ್ತಾನೆ. ಅಥವಾ ಕನಸಿತ್ತು ಕಡಲಿನಲ್ಲಿ ಎನ್ನುವ ಮೂಲಕ ಕವಿಯ ಪರೋಕ್ಷ ಉತ್ತರ ಬೇರೆಯದೆ ಆಗಿರುವುದನ್ನು ಕೂಡಾ ಇಲ್ಲಿ ಗಮನಿಸಬಹುದು.

ತೆಂಗು ತಾರೆಗಳ ಸಂಗಮವು ಮುಗಿದು ಮನಸಿತ್ತು ಮುಗಿಲಿನಲಿ - ಎಂಬ ಸಾಲಿನಲ್ಲಿ ತಮ್ಮೊಳಗಿನ ಕಾವ್ಯದ ವಿನೂತನ ಶೈಲಿಯನ್ನು ದಾಖಲಿಸುತ್ತಾರೆ ಸಿದ್ಧಲಿಂಗಯ್ಯನವರು. ಆಕಾಶದೆತ್ತರಕ್ಕೆ ಬೆಳೆದು ನಿಂತ ತೆಂಗಿನಮರ ತಾರೆಗಳೊಂದಿಗೆ ಮಾತನಾಡುತ್ತಿದೆ, ಭಾವನೆಗಳನ್ನು ಅಂಚಿಕೊಳ್ಳುತ್ತದೆ. ಒಟ್ಟಾರೆಯಾಗಿ ತೆಂಗು ತಾರೆಗಳು ಆತ್ಮೀಯವಾಗಿ ಸಂಗಮಿಸುತ್ತವೆ ಎಂಬ ಕವಿಯ ಆಶಯ ಅವರೊಳಗಿನ ಸೃಜನ ಶೀಲತೆಗೆ ಹಿಡಿದ ಕನ್ನಡಿ. ಮನಸಿತ್ತು ಮುಗಿಲಿನಲ್ಲಿ ಎನ್ನುವಾಗ ಅವರ ಕಾವ್ಯದ ಧೀಶಕ್ತಿ ಎಂತಹುದು ಎಂದು ಅರಿತುಕೊಳ್ಳಬಹುದು.ಹೀಗೆ, ಕವಿ ಸಿದ್ಧಲಿಂಗಯ್ಯನವರ ಗೀತೆಗೂ, ಬಾನಲ್ಲೆ ಮಧುಚಂದ್ರಕೆ ಚಿತ್ರದ ಸನ್ನಿವೇಶಕ್ಕೆ ಹೊಂದಾಣಿಕೆಯಾಗಿದ್ದು ಹಾಡು ಉತ್ತಮವಾಗಿ ಹೊಂದುತ್ತವೆ. ಈ ಗೀತೆಯನ್ನು ನೀಡಿದ ಸಿದ್ಧಲಿಂಗಯ್ಯನವರಿಗೆ ಧನ್ಯವಾದ.

'ಸುಟ್ಟಾವು ಬೆಳ್ಳಿಕಿರಣ'

ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ

ಸುಳಿದಾಡಬೇಡ ಗೆಳತಿ

ಚೆಲುವಾದ ನಿನ್ನ ಮಲ್ಲಿಗೆಯ ಮಯ್ಯ

ಸುಟ್ಟಾವು ಬೆಳ್ಳಿ ಕಿರಣ

ಇಳಿಜಾರಿನಲ್ಲಿ ಆ ಕಣಿವೆಯಲ್ಲಿ

ನೀ ಇಳಿಯ ಬೇಡ ಗೆಳತಿ

ತತ್ತರಿಸುವಂತೆ ಕಾಲಲ್ಲಿ ಕಮಲ

ಮುತ್ತುವವು ಮೊಲದ ಹಿಂಡು

ಈ ಊರ ಬನಕೊಬ್ಬಳೇ ಒಂಟಿ

ಹೂವಾಗಿ ಅರಳಿ ನೀನು

ಮರೆಯಾಗಬೇಡ ಮಕರಂದವೆಂದ

ದುಂಬಿಗಳ ದಾಳಿಯಲ್ಲಿ

ನನ್ನೆದೆಯ ತೋಟದಲ್ಲಂದು ನೀನು

ನೆಟ್ಟಂತ ಪ್ರೀತಿ ಬಳ್ಳಿ

ಫಲ ಕೊಟ್ಟಿತೇನೆ ಹೂ ಬಿಟ್ಟಿತೇನೆ

ಉಲ್ಲಾಸವನ್ನು ಚೆಲ್ಲಿ

ನಿನ್ನಂತರಂಗದಲ್ಲೊಂದು ನೋವು

ನಾನಾಗಿ ನಿಂತು ಬಿಟ್ಟೆ

ನೀನೊಪ್ಪಿಕೊಂಡ ಚಂದಿರನ ಕಣ್ಣ

ಬೆಳಕಾಗಿ ಕೂಡಿಕೊಂಡೆ

ನೀನಿತ್ತ ಒಲವು ನಾನಿತ್ತ ವಿಷವು

ಒಂದಾಗಲಾರವೆಂದು

ನೀ ಕೊಟ್ಟ ಜೀವ ನಾ ಕೊಟ್ಟ ಸಾವು

ಸಮನಾಗಬಹುದೆ ಗೆಳತಿ

ಕಂಡಂಥ ಕನಸು ಫಲಿಸಿತ್ತೆ ಗೆಳತಿ

ಕನಸಿತ್ತು ಕಡಲಿನಲ್ಲಿ

ತೆಂಗು ತಾರೆಗಳ ಸಂಗಮವು ಮುಗಿದು

ಮನಸಿತ್ತು ಮುಗಿಲಿನಲ್ಲಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ