'ಎಕ್ಕುಂಡಿಯವರ ಕೈ ಕುಲುಕುತ್ತಾ ...'
ಹಾವೇರಿ ಜಿಲ್ಲೆಯ ರಾಣಿಬೆನ್ನೂರಿನಲ್ಲಿ ೧೯೨೩ರಲ್ಲಿ ಜನಿಸಿ ೧೯೯೫ ರಲ್ಲಿ ಬೆಂಗಳೂರಿನಲ್ಲಿ ನಿಧನರಾದ ಸುಬ್ಬಣ್ಣ ರಂಗನಾಥ ಎಕ್ಕುಂಡಿಯವರು ಸು.ರಂ. ಎಕ್ಕುಂಡಿ ಎಂದೇ ಪರಿಚಿತರು. ವೃತ್ತಿಯಲ್ಲಿ ಉಪಾಧ್ಯಾಯರಾಗಿದ್ದುಕೊಂಡು ಕಾವ್ಯಕೃಷಿಯನ್ನು ಮಾಡುತ್ತಾ ಕನ್ನಡ ಸಾಹಿತ್ಯರಂಗ ದಲ್ಲಿ ವಿಶಿಷ್ಟವಾದ ಸ್ಥಾನವನ್ನು ಗಿಟ್ಟಿಸಿಕೊಂಡವರು. ಮೈಥಾಲಜಿ ಮತ್ತು ವರ್ತಮಾನಗಳ ನಡುವಣ ಜಿಜ್ಞಾಸೆಗಳಿಗೆ ಉತ್ತರ ಹುಡುಕುತ್ತಾ ಹೊರಟು ಹೊಸ ಚಿಂತನೆಗಳ ಹುಟ್ಟಿಗೆ ಕಾರಣಕರ್ತರಾದರು.
ಸಾಂಗ್ಲಿಯ ವಿಲ್ಲಿಂಗ್ಡನ್ ಕಾಲೇಜಿಲ್ಲಿ ವಿ.ಕೃ.ಗೋಕಾಕ್ ಹಾಗು ರಂ.ಶ್ರೀ. ಮುಗಳಿಯವರ ಶಿಷ್ಯನಾಗಿ ಸಾಹಿತ್ಯವನ್ನು ಐಚ್ಛಿಕ ವಿಷಯವಾಗಿ ಸ್ವೀಕರಿಸಿ ಪಧವಿ ಪಡೆದವರು. ಕುತೂಹಲಕರ ಸಂಗತಿಯೆಂದರೆ, ವಿದ್ಯಾರ್ಥಿದೆಸೆಯಲ್ಲಿ ಗಂಗಾಧರ ಚಿತ್ತಾಲ ಇವರ ಸಹಪಾಠಿಯಾಗಿದ್ದರು. ಹೀಗೆ, ಸಾಹಿತ್ಯದ ಒಡನಾಡಿಗಳ ಒಡನಾಟದಲ್ಲಿದ್ದುಕೊಂಡು ತಮ್ಮೊಳಗಿನ ಸೃಜನಶೀಲತೆಗೆ ಕಾವು ಕೊಡುತ್ತಾ ಮುಂದೊಂದು ದಿನ ದೊಡ್ಡ ಸಾಹಿತಿಯಾಗಿ ರೂಪುಗೊಂಡರು.
ಕಾವ್ಯ, ಸಣ್ಣಕತೆಗಳನ್ನು ರಚಿಸುವುದರಲ್ಲಿ ನಿಸ್ಸೀಮರಾಗಿದ್ದ ಎಕ್ಕುಂಡಿಯವರು ಎರಡು ರಷ್ಯನ್ ಕಾದಂಬರಿಗಳನ್ನು ಕನ್ನಡಿಗರಿಗಾಗಿ ಅನುವಾದಿಸಿಕೊಟ್ಟಿದ್ದಾರೆ. ಬಕುಳದ ಹೂವುಗಳು, ಉಭಯ ಭಾರತಿ, ಸುಭದ್ರ, ಮತ್ಸ್ಯಗಂಧಿ, ಕಥನ ಕಾವ್ಯಗಳು, ಹಾವಾಡಿಗನ ಹುಡುಗಿ ಹಾಗೂ ಬೆಳ್ಳಕ್ಕಿಗಳು ಇವರ ಪ್ರಮುಖ ಕೃತಿಗಳು. ಬೆಳ್ಳಕ್ಕಿ ಹಿಂಡು ಎಕ್ಕುಂಡಿಯವರ ಸಮಗ್ರ ಕಾವ್ಯ. ತಮ್ಮ ಕವಿತೆಗಳ ಮೂಲಕ ಕನ್ನಡ ಕಾವ್ಯ ರಸಿಕರ ಗಮನ ಸೆಳೆದ ಸು.ರಂ. ವಿಮರ್ಶಕರಿಂದಲೂ ಮೆಚ್ಚುಗೆ ಗಳಿಸಿದ್ದಾರೆ.
ಇವರ ಸಾಹಿತ್ಯ ಸೇವೆಯನ್ನು ಗುರುತಿಸಿ ಸಾಹಿತ್ಯ ಅಕಾಡೆಮಿಯವರು ಪ್ರಶಸ್ತಿಯನ್ನು ನೀಡಿದ್ದರೆ, ಇವರ ಭೋದನಾ ಪ್ರತಿಭೆಯನ್ನು ಗೌರವಿಸು ನಿಟ್ಟಿನಲ್ಲಿ ರಾಷ್ಟ್ರ ಪ್ರಶಸ್ತಿ ಲಭಿಸಿದೆ. ಜೊತೆಗೆ ಸೋವಿಯತ್ ಲ್ಯಾಂಡ್ ಅವಾರ್ಡ್‌ಗಳು ಎಕ್ಕುಂಡಿಯವರ ಪಾಲಾಗಿವೆ. ಇಷ್ಟೊಂದು ಹಿನ್ನೆಲೆಯಿರುವ ಎಕ್ಕುಂಡಿಯವರ ಯಾವ ಕಾಣಿಕೆ ನೀಡಲಿ ಕವಿತೆಯು ಎಸ್.ಆರ್. ಪುಟ್ಟಣ್ಣ ಕಣಗಾಲ್ ನಿರ್ದೇಶನದ ಮಸಣದ ಹೂವು ಚಿತ್ರದಲ್ಲಿ ಚಿತ್ರಗೀತೆಯಾಗಿದೆ. ವಿಜಯ್‌ಭಾಸ್ಕರ್ ರಾಗ ಸಂಯೋಜನೆಯುಳ್ಳ ಈ ಗೀತೆಗೆ ಡಾ|| ಎಸ್.ಪಿ. ಬಾಲಸುಬ್ರಮಣ್ಯಂ ರವರು ಧ್ವನಿಯಾಗಿದ್ದಾರೆ. ೧೯೮೫ರಲ್ಲಿ ತೆರೆಕಂಡ ಮಸಣದ ಹೂವು ಈ ಗೀತೆ ಸಂಗೀತ ಪ್ರಿಯರ ಮನಸ್ಸಿನಲ್ಲಿ ಹಾಸುಹೊಕ್ಕಾಗಿರುವ ಅಂಶ ಎಕ್ಕುಂಡಿಯವರ ಭಾವನೆಗಳ ಜೀವಂತಿಕೆಯನ್ನು ಎತ್ತಿಹಿಡಿಯುತ್ತದೆ.
'ಪುಟ್ಟಣ್ಣನ ಸ್ಪಷ್ಟ ನಿಲುವು'
ಕನ್ನಡ ಕಾದಂಬರಿಗಳನ್ನು ತೆರೆಮೇಲೆ ತಂದು ಹೊಸ ಅಲೆ ಸೃಷ್ಠಿಸಿದ ಕಣಗಾಲ್ ಪುಟ್ಟಣ್ಣನವರು ಕನ್ನಡ ಚಿತ್ರರಂಗದ ಅನರ್ಘ್ಯರತ್ನ. ಕಾವ್ಯ, ಕಥೆ, ನಾಟಕ ಹಾಗೂ ಕಾದಂಬರಿಗಳ ಅಧ್ಯಯನದ ಅನಿವಾರ್ಯತೆ ಒಬ್ಬ ಚಿತ್ರ ನಿರ್ದೇಶಕನಿಗೆ ಎಷ್ಟು ಅವಶ್ಯಕ ಎನ್ನುವುದನ್ನು ಪುಟ್ಟಣ್ಣನವರು ತೋರಿಸಿಕೊಟ್ಟವರು. ತಾವು ನಿರ್ದೇಶಿಸಿದ ಬಹುತೇಕ ಚಿತ್ರಗಳಲ್ಲಿ ಪ್ರಸಿದ್ಧ ಕವಿಗಳ ಗೀತೆಗಳನ್ನು ಬಳಸಿಕೊಂಡು ಚಿತ್ರದ ಸಂಗೀತದ ಗುಣಮಟ್ಟವನ್ನು ಹೆಚ್ಚಿಸಿಕೊಂಡು ಪ್ರೇಕ್ಷಕನ ಮನಸ್ಸಿಗೆ ಮುದನೀಡುವುದರ ಬಗ್ಗೆ ನಮ್ಮ ನಾಡಿನ ಸಾಹಿತ್ಯ ಜನರಿಗೆ ತಲುಪುವುದಕ್ಕೂ ಸಹಕರಿಸಿದವರು.
ಇತ್ತೀಚಿನ ದಿನಗಳಲ್ಲಿ ಕಥೆ, ಚಿತ್ರಕಥೆ, ಸಂಭಾಷಣೆ, ಗೀತ ರಚನೆ, ನಿರ್ದೇಶನ - ಹೀಗೆ ಉದ್ದವಾದ ಪಟ್ಟಿಯ ಕೆಳಗೆ ತಮ್ಮ ಹೆಸರನ್ನು ಲಗತ್ತಿಸಿ ಪ್ರೇಕ್ಷಕನ ಮನಸ್ಸಿಗೆ ಕಿರಿಕಿರಿ ಉಂಟುಮಾಡುವ ಸ್ವಯಂಘೋಷಿತ ಬುದ್ಧಿವಂತರ ನಡುವೆ ಪುಟ್ಟಣ್ಣನಂತಹ ನಿಜವಾದ ಕ್ರಿಯಾಶೀಲ ವ್ಯಕ್ತಿ ವಿಶೇಷವಾಗಿ ನಿಂತು ಮಾದರಿಯಾಗುತ್ತಾರೆ. ದೊಡ್ಡ ನಿರ್ದೇಶಕನಾಗಬೇಕೆನ್ನುವ ಹಂಬಲದ ಜೊತೆಗೆ ಅಧ್ಯಯನವೂ ಮುಖ್ಯ ಎಂದು ಪರೋಕ್ಷವಾಗಿ ಸಾರುತ್ತಾರೆ.
ತಾವು ಬರೆದದ್ದೇ ಕಥೆ, ಮಾಡಿದ್ದೇ ಸಿನಿಮಾ ಎಂಬೆಲ್ಲಾ ಭ್ರಮೆಗಳೊಂದಿಗೆ ಜೀವಿಸುತ್ತಿರುವ ಪ್ರಚಾರಪ್ರಿಯರ ನಡುವೆ ಪುಟ್ಟಣ್ಣ ನಿಜಕ್ಕೂ ದೊಡ್ಡ ವ್ಯಕ್ತಿಯಾಗುತ್ತಾರೆ. ನೀವೇ ಹೇಳಿ, ಇವತ್ತಿನ ಎಷ್ಟುಜನ ನಿರ್ದೇಶಕರಿಗೆ ಕಾದಂಬರಿ ಓದುವ ಹವ್ಯಾಸವಿದೆ, ಕಾವ್ಯಾಧ್ಯಯನದ ಉತ್ಸಾಹವಿದೆ ? ಹತ್ತು ಸಿ.ಡಿ. ನೋಡಿ ಒಂದು ಕಥೆ ಸಿದ್ಧಪಡಿಸುವ ಇಂತಹವರಿಂದ ಪ್ರೇಕ್ಷಕ ಏನು ತಾನೇ ನಿರೀಕ್ಷಿಸುತ್ತಾನೆ. ಉತ್ತಮ ಕತೆಗಾರರನ್ನು ಹತ್ತಿರ ಸೇರಿಸಿಕೊಳ್ಳದೇ ತನ್ನ ಸುತ್ತಮುತ್ತಲಿನವರ ಮೇಲೆ ನಂಬಿಕೆಯಿಟ್ಟು ಅಪ್ರಬುದ್ಧ ನಿರ್ದೇಶಕರಿಗೆ ಅವಕಾಶ ಕೊಟ್ಟು ಎಕ್ಕುಟ್ಟಿಹೋಗುತ್ತಿರುವ ಉದಾಹರಣೆಗಳು ನಮ್ಮ ಕಣ್ಮುಂದೆಯೇ ಇದೆ. ಇವರೆಲ್ಲಾ ಒಮ್ಮೆ ಪುಟ್ಟಣ್ಣ ಕಣಗಾಲ್‌ರವರನ್ನು ನೆನಪಿಸಿಕೊಂಡರೆ ಬುದ್ಧಿ ಬರಬಹುದು. ಹತ್ತು ಸಿ.ಡಿ. ನೋಡುವ ಬದಲಾಗಿ ಒಂದು ಕಾದಂಬರಿ ಓದುವುದರ ಉಪಯೋಗದ ಅರಿವು ಗೊತ್ತಾಗಬಹುದು. ಸಿನಿಮಾ ಎನ್ನುವುದು ಎರಡೂವರೆ ಗಂಟೆಗಳ ಕಾಲ ಸುತ್ತಿಬಿಡುವ ರೀಲಾಗಬಾರದು. ಎರಡೂವರೆ, ಮೂರೂವರೆ ದಶಕಗಳಾದರೂ ಮತ್ತೇ ಮತ್ತೇ ನೋಡಬೇಕೆನಿಸುವ ಜೀವಂತ ಕೃತಿಯಾಗಬೇಕು.
ಇನ್ನುಮುಂದೆಯಾದರೂ ಪುಟ್ಟಣ್ಣವರಂತ ನಮ್ಮ ಮಣ್ಣಿನ, ನಮ್ಮ ಸಂಸ್ಕೃತಿಯ, ನಮ್ಮ ಜೀವನಕ್ಕೆ ಹತ್ತಿರವಾದ ಕಥೆಗಳು ಚಿತ್ರಗಳಾಗಲಿ. ನಮ್ಮ ಸಾಹಿತಿಗಳ ಕಾದಂಬರಿಗಳು ತೆರೆಯ ಮೇಲೆ ಮೂಡಲಿ. ಹಾಳೂರಿಗೆ ಉಳಿದವನೇ ಗೌಡ ಎನ್ನುವ ಗಾದೆ ಸುಳ್ಳಾಗಲಿ. ಪ್ರಜ್ಞಾವಂತ, ಕ್ರಿಯಾಶೀಲ ನಿರ್ದೇಶಕರು ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಬರಲಿ ಅವರಿಗೆ ಸದಭಿರುಚಿ ನಿರ್ಮಾಪಕರು ಸಾಥ್ ನೀಡಲಿ. ನಮ್ಮೆಲರಿಗೂ ಪುಟ್ಟಣ್ಣವರಿಗಿದ್ದ ಕಾದಂಬರಿ ಪ್ರೇಮ, ಸತ್ಯದ ಮೇಲಿನ ನಂಬಿಕೆ ಮನದಟ್ಟಾಗಲಿ, ಮಾದರಿಯಾಗಲಿ.
'ಎಕ್ಕುಂಡಿಯವರ ಕಲ್ಪನಾಲೋಕ'
ತನ್ನ ಪ್ರಿಯತಮೆಗೆ ಹುಟ್ಟುಹಬ್ಬದ ಉಡುಗೊರೆಯನ್ನು ನೀಡಬೇಕಾದ ಸಂದರ್ಭದಲ್ಲಿ ನಾಯಕನ ಎದೆಯಾಳದಲ್ಲಿ ಮೂಡುವ ಭಾವನೆಗಳಿಗೆ ಸು.ರಂ. ಎಕ್ಕುಂಡಿಯವರ ಕವಿತೆ ಔಚಿತ್ಯಪೂರ್ಣವಾಗಿದೆ.
ಕವಿ ತನ್ನೊಳಗಿನ ರಮ್ಯಲೋಕವನ್ನು ನಮಗೆ ತೋರಿಸುವ ಪ್ರಯತ್ನ ಈ ಗೀತೆಯಲ್ಲಿದೆ. ಪ್ರೀತಿಗೆ ಮಿಗಿಲಾದ ಕಾಣಿಕೆ ಇಲ್ಲ. ತಾನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ ಪ್ರೇಯಸಿಗೆ ಯಾವ ಉಡುಗೊರೆ ನೀಡಿದರೂ ಕಮ್ಮಿಯೇ ! ಈ ಸತ್ಯ ಎಕ್ಕುಂಡಿಯವರ ಕವಿ ಮನಸ್ಸಿಗೆ ಅರಿವಾಗಿದೆ, ಅದರ ಪರಿಣಾಮವೇ ಯಾವ ಕಾಣಿಕೆ ನೀಡಲಿ ನಿನಗೆ ಹಾಡು.ಯಾವ ಕಾಣಿಕೆ ನೀಡಲಿ ನಿನಗೆ ಓ ನನ್ನ ಪ್ರೇಯಸಿ ಎಂದು ಪ್ರಶ್ನಿಸುವ ಮೂಲಕ ಹಾಡು ಆರಂಭವಾಗುತ್ತದೆ. ತಾನು ನೀಡಬೇಕಾದ ಕಾಣಿಕೆ ಎಷ್ಟು ಅರ್ಥಪೂರ್ಣವಾಗಿರಬೇಕು ಎಂಬ ಪ್ರಶ್ನೆಯೂ ಈ ಸಾಲಿನಲ್ಲಿ ಧ್ವನಿಸುತ್ತದೆ ಅಥವಾ ತನಗೆ ಯಾವ ಕಾಣಿಕೆ ಬೇಕೆಂಬುದನ್ನು ತನ್ನವಳೇ ಹೇಳಲಿ ಎಂಬ ಆಶಯವೂ ತಲೆದೋರುತ್ತದೆ.
ಮಲೆನಾಡ ಕಣಿವೆಗಳ ಹಸಿರುಬನದಿಂದ ಗಿಣಿಯನ್ನು ತಂದುಕೊಡಲಾರೆ ಎಂದು ಕವಿ ಮುಂದುವರೆಸುತ್ತಾರೆ. ಹಾಗೊಂದುವೇಳೆ ಅದನ್ನು ತಂದು ನೀಡಿದರೆ ತನ್ನ ಆಶಯ ಪೂರ್ತಿಯಾಗದು ಎಂಬ ಗೂಢಾರ್ಥವೂ ಅಲ್ಲಿ ಅಡಗಿರಬಹುದು. ಹಾಗೆಯೇ, ಸಮುದ್ರದ ಅಲೆಗಳ ಮೇಲೆ ಉಯ್ಯಾಲೆಯಂತೆ ತೂಗುವ ಹಂಸನಾವೆಯನ್ನು ತರಲಾರೆ ಎನ್ನುತ್ತಾರೆ. ಇಲ್ಲಿ, ಕವಿ ಹಂಸವನ್ನು ನಾವೆಗೆ ಹೋಲಿಸಿ ತಮ್ಮ ಕಾವ್ಯಶಕ್ತಿಯನ್ನು ಮೆರೆದಿದ್ದಾರೆ. ಹಕ್ಕಿಗಳು ಹಾಡುವಾಗ ಧ್ವನಿಗೂಡಿಸು ವಂತಿರುವ ಮಂದಾನಿಲದ ವೀಣೆಯನ್ನು ತರಲಾರೆನೆಂದು ಹೇಳುತ್ತಾರೆ. ಮಂದಾನಿಲದ ವೀಣೆಯ ಪ್ರಯೋಗ ವಿಶೇಷವಾಗಿ ಗಮನ ಸೆಳೆಯುತ್ತದೆ. ನಂದನವನದಲ್ಲಿ ಅರಳಿನಿಂತು ಮಕರಂದ ಬೀರುವ ಮಂದಾರಪುಷ್ಪವನ್ನು ತರಲಾರೆನೆಂದು ಹೇಳುವ ಮೂಲಕ ಕವಿ ವಾಸ್ತವಾಂಶವನ್ನು ಗಮನದಲ್ಲಿಟ್ಟುಕೊಂಡೂ, ತಾನು ಏನೇ ಉಡುಗೊರೆ ನೀಡಿದರೂ ಕಡಿಮೆಯೇ ಎಂದು ಪರೋಕ್ಷವಾಗಿ ವ್ಯಕ್ತಪಡಿಸುತ್ತಾರೆ.
ಎಷ್ಟೋ ರಾಣಿಯರನ್ನು ತನ್ನ ಹೆಗಲಮೇಲೆ ಹೊತ್ತು ರಾಜಬೀದಿಗಳಲ್ಲಿ ಮೆರವಣಿಗೆ ಹೊರಟು ಎಲ್ಲರ ಗಮನ ಸೆಳೆದಿರುವ ಮುತ್ತಿನ ಪಲ್ಲಕ್ಕಿಯನ್ನೂ ತರಲಾರೆ ಎನ್ನುತ್ತಾರೆ. ಅಂತೆಯೇ, ಸೂರ್ಯ-ಚಂದ್ರರನ್ನೂ ತರಲಾರೆ ಎಂದು ಹೇಳುವ ಮೂಲಕ ಹಾಡಿಗೊಂದು ಅಂತ್ಯ ನೀಡುತ್ತಾರೆ.
ಇಲ್ಲಿ ನಾವು ಗಮನಿಸಬೇಕಾದ ಮುಖ್ಯಾಂಶವೆಂದರೆ, ಕವಿ ತನ್ನ ಕಲ್ಪನಾಲಹರಿಯಲ್ಲಿ ಏನೆಲ್ಲಾ ಕಲ್ಪಿಸಿಕೊಂಡರೂ ವಾಸ್ತವ ಅದಕ್ಕೆ ತದ್ವಿರುದ್ಧವಾಗಿರುತ್ತದೆ. ಅಸಾಧ್ಯವಾದುದನ್ನೆಲ್ಲಾ ಹಾಡಿನಲ್ಲಿ ಹಾಡಲಷ್ಟೇ ಚೆಂದ. ಆದರೆ, ನಿಜಜೀವನದಲ್ಲಿ ಕಾರ್ಯರೂಪಕ್ಕೆ ತರುವುದು ಸುಲಭದ ಮಾತಲ್ಲ. ಏನೇ ಆಗಲೀ, ಇಂಥದ್ದೊಂದು ಅದ್ಭುತಗೀತೆ ನಮಗಾಗಿ ನೀಡಿದ ಸು.ರಂ. ಎಕ್ಕುಂಡಿಯವರಿಗೆ ಧನ್ಯವಾದ ಸಲ್ಲಿಸೋಣ.
'ಯಾವ ಕಾಣಿಕೆ ನೀಡಲಿ ನಿನಗೆ'
ಯಾವ ಕಾಣಿಕೆ ನೀಡಲಿ ನಿನಗೆ
ಓ ನನ್ನ ಪ್ರೇಯಸಿ ?
ಮಲೆನಾಡ ಕಣಿವೆಗಳ ಹಸಿರು ಬನದಿಂದ
ನಿನಗಾಗಿ ಗಿಣಿಯೊಂದ ನಾ ತರಲಾರೆ,
ಸಾಗರದ ಅಲೆಗಳಲ್ಲಿ ಉಯ್ಯಾಲೆಯಾಡಿರುವ
ಹಂಸನಾವೆಯ ನಾ ತರಲಾರೆ !
ಹಕ್ಕಿಗಳ ಜತೆಗೆ ಸ್ವರವೆತ್ತಿ ಪಾಡಿರುವ
ಮಂದಾನಿಲದ ವೀಣೆಯ ತರಲಾರೆ,
ನಂದನವನದ ಮಂದಾರಪುಷ್ಪವ
ನಾ ನಿನಗೆ ತರಲಾರೆ !
ಹಲವು ಅರಸಿಯರ ಹೊತ್ತುಮೆರೆಸಿರುವ
ಮುತ್ತಿನ ಪಲ್ಲಕ್ಕಿಯ ನಾ ತರಲಾರೆ,
ಮಣ್ಣಿನಲಿ ನೀರಿನಲ್ಲಿ ಬದುಕನೆ ಸವೆಸಿರುವ
ಸೂರ್ಯಚಂದ್ರರ ನಾ ತರಲಾರೆ !
...
ಪ್ರತ್ಯುತ್ತರಅಳಿಸಿನಿಜವಾದ ಮಾತುಗಳು ಹೃದಯಶಿವ!
"ತಾವು ಬರೆದದ್ದೇ ಕಥೆ, ಮಾಡಿದ್ದೇ ಸಿನಿಮಾ ಎಂಬೆಲ್ಲಾ ಭ್ರಮೆಗಳೊಂದಿಗೆ ಜೀವಿಸುತ್ತಿರುವ ಪ್ರಚಾರಪ್ರಿಯರ ನಡುವೆ ಪುಟ್ಟಣ್ಣ ನಿಜಕ್ಕೂ ದೊಡ್ಡ ವ್ಯಕ್ತಿಯಾಗುತ್ತಾರೆ. ನೀವೇ ಹೇಳಿ, ಇವತ್ತಿನ ಎಷ್ಟುಜನ ನಿರ್ದೇಶಕರಿಗೆ ಕಾದಂಬರಿ ಓದುವ ಹವ್ಯಾಸವಿದೆ, ಕಾವ್ಯಾಧ್ಯಯನದ ಉತ್ಸಾಹವಿದೆ ?"