ಸೋಮವಾರ, ಮಾರ್ಚ್ 12, 2012

ಕರಿಬಸವಯ್ಯ ಕಣ್ಮರೆ

ಕೆ.ಬಿ.ಎಂದೇ ಪರಿಚಿತರಾಗಿದ್ದ ಪ್ರತಿಭಾವಂತ ನಟ ಕರಿಬಸವಯ್ಯ ಇಂದು ನಮ್ಮೊಂದಿಗಿಲ್ಲ.ಹಾಗಂತ ಅವರು ಜೀವ ತುಂಬಿದ ಪಾತ್ರಗಳಿಗಾಗಲಿ,ಅವರು ಮೂಡಿಸಿದ ದಾಖಲಾರ್ಹ ಹೆಜ್ಜೆಗಳಿಗಾಗಲಿ ಯಾವತ್ತೂ ಕೊನೆಯೆಂಬುದಿಲ್ಲ.ನಾಟಕವಿರಲಿ,ಧಾರಾವಾಹಿಯಿರಲಿ,ಸಿನಿಮಾ ಇರಲಿ ಅಥವಾ ಹರಿಕಥೆ-ಹಾಸ್ಯ ಕಾರ್ಯಕ್ರಮಗಳಿರಲಿ,ಅಲ್ಲಿ ಕರಿಬಸವಯ್ಯ ತಮ್ಮದೇ ವಿನೂತನ ಶೈಲಿಯ ಪ್ರತಿಭಾ ಪ್ರದರ್ಶನದಿಂದ ಕಲಾ ರಸಿಕರ ಮನಸುಗಳಲ್ಲಿ ನವಿರು ಭಾವನೆಗಳನ್ನು ಮೂಡಿಸುವಲ್ಲಿ ಯಶಸ್ವಿಯಾಗುತ್ತಿದ್ದರು.

ನೆಲಮಂಗಲ ಸಮೀಪದ ಕೊಡಿಗೆಹಳ್ಳಿಯಿಂದ ಕನಸುಗಳ ಬುತ್ತಿಯನ್ನು ಹೆಗಲಿಗೇರಿಸಿಕೊಂಡು ಬೆಂಗಳೂರಿನ ಬೀದಿಗಳಲ್ಲಿ ತಿರುಗುತ್ತಿದ್ದ ಕರಿಬಸವಯ್ಯನವರಿಗೆ ಮೊದಲು ಕೈ ಹಿಡಿದಿದ್ದು ರಂಗಭೂಮಿ.ಮೊದಲೆಲ್ಲ ಚಿಕ್ಕ ಚಿಕ್ಕ ಪಾತ್ರಗಳನ್ನೂ ನಿರ್ವಹಿಸುತ್ತಿದ್ದ ಇವರು ಆ ಪಾತ್ರಗಳಿಗೆ ಜೀವ ತುಂಬಿ ಅಭಿನಯಿಸುವ ಮೂಲಕ ಹಿರಿಯ ರಂಗತಜ್ಞರ ಗಮನ ಸೆಳೆಯುವಲ್ಲಿ ಯಶಸ್ವಿಯಾದರು.ಕ್ರಮೇಣ ಪ್ರಮುಖ ಪಾತ್ರಗಳು ಇವರನ್ನು ಹುಡುಕಿಕೊಂಡು ಬರತೊಡಗಿದವು.೧೯೮೯ ರಲ್ಲಿ 'ರೂಪಾಂತರ'ಕ್ಕೆ ಸೇರಿದ ನಂತರವಂತೂ ಕರಿಬಸವಯ್ಯನವರ ಇಮೇಜೇ ಬದಲಾಗತೊಡಗಿತು.

ನಿರಂತರ ರಂಗ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು.'ತಲೆದಂಡ' ನಾಟಕದ ಬಸವಣ್ಣನ ಪಾತ್ರವಿರಬಹುದು,'ಮುಸ್ಸಂಜೆಯ ಕಥಾ ಪ್ರಸಂಗ'ದ ಬಸ್ಯನ ಪಾತ್ರವಿರಬಹುದು,'ಕರ್ವಾಲೋ'ದ ಬಿರಿಯಾನಿ ಕರಿಯನ ಪಾತ್ರವಿರಬಹುದು,ಗಾಂಧೀ ಜಯಂತಿ,ಗುಣಮುಖ,ಬಡೇ ಸಾಬ್ ಪುರಾಣ,ಮಳೆ ಬೀಜ ಸೇರಿದಂತೆ ಅನೇಕ ನಾಟಕಗಳಲ್ಲಿ ಅವರು ನಿರ್ವಹಿಸಿದ ವಿಭಿನ್ನ ಪಾತ್ರಗಳಿರಬಹುದು-ಯಾವುದೇ ಪಾತ್ರವಿದ್ದರೂ ಪಾತ್ರವೇ ತಾವಾಗಿ ಪರಕಾಯ ಪ್ರವೇಶ ಮಾಡುತ್ತಿದ್ದಂತಹ ಅಪೂರ್ವ,ಅನನ್ಯ ಕಲಾವಿದ ಕರಿಬಸವಯ್ಯನವರು.

ಯಾವಾಗ ರಂಗಭೂಮಿಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದರೋ ಸಿನಿಮಾ ಮಂದಿಯ ಕಣ್ಣು ಕೆ.ಬಿ.ಯವರ ಕಡೆ ಹರಿಯಿತು.ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ ತಮ್ಮ ನಿರ್ದೇಶನದ 'ಉಂಡು ಹೋದ ಕೊಂದು ಹೋದ'ಚಿತ್ರದಲ್ಲಿ ಅವಕಾಶ ನೀಡಿದರು.ಆ ಚಿತ್ರ ಯಾವಾಗ ಭರ್ಜರಿ ಯಶಸ್ಸು ಸಾಧಿಸಿತೋ ಕರಿಬಸವಯ್ಯನವರಿಗೆ ಅನೇಕ ಅತ್ಯುತ್ತಮ ಅವಕಾಶಗಳು ಬರತೊಡಗಿದವು.ಕೊಟ್ರೇಶಿ ಕನಸು,ಜನುಮದ ಜೋಡಿ,ಮುಂಗಾರಿನ ಮಿಂಚು,ಯಾರಿಗೆ ಸಾಲತ್ತೆ ಸಂಬಳ-ಚಿತ್ರಗಳನ್ನೊಳಗೊಂಡಂತೆ ಹತ್ತು ಹಲವು ಬಗೆಯ ಪಾತ್ರಗಳಲ್ಲಿ ಅನೇಕ ಚಿತ್ರಗಳಲ್ಲಿ ನಟಿಸುವ ಮೂಲಕ ತಮ್ಮದೇ ಹೆಜ್ಜೆ ಗುರುತು ಮೂಡಿಸುವಲ್ಲಿ ಯಶಸ್ವಿಯಾಗತೊಡಗಿದರು.

ಕರಿಬಸವಯ್ಯನವರು ಸ್ವಭಾವತಃ ತುಂಬ ಚುರುಕಿನ ಮನುಷ್ಯರಾಗಿದ್ದರು.ದಿನದ ಇಪ್ಪತ್ನಾಲ್ಕು ಗಂಟೆ ಯಾವುದಾದರೊಂದು ಕೆಲಸದಲ್ಲಿ ನಿರತರಾಗಿ ಸದಾ ಲವಲವಿಕೆಯಿಂದಿರುತ್ತಿದ್ದರು. ಕೆ.ಬಿ.ಯವರ ಮತ್ತೊಂದು ಇಷ್ಟವಾಗುವ ಅಂಶವೆಂದರೆ ಎಂಥವರೊಂದಿಗೂ ಒಗ್ಗಿಬಿಡುವ,ಇಷ್ಟವಾಗಿಬಿಡುವ ವ್ಯಕ್ತಿತ್ವ.ತಾವೊಬ್ಬ ಪ್ರಸಿದ್ಧ ನಟನೆಂಬ ಕಿಂಚಿತ್ತು ಅಹಂಕಾರವಿಲ್ಲದೆ ಎಲ್ಲರನ್ನು ಪ್ರೀತಿಯಿಂದ ಮಾತನಾಡಿಸುತ್ತಿದ್ದರು.ತಮ್ಮ ಕಾಯಕದಲ್ಲಿ ಸದಾ ದೇವರನ್ನು ಕಾಣಲೆತ್ನಿಸುತ್ತಿದ್ದರು.ಅವರ ಸರಳತೆ ಹಾಗು ಸಹೃದಯತೆಗೆ ಹಲವಾರು ಉದಾಹರಣೆ ಕೊಡಬಹುದು:ಹರಿಕಥೆ ನಡೆಸಿಕೊಡಬೇಕೆಂದು ಎಲ್ಲಿಂದ ಕರೆ ಬಂದರೂ ತಕ್ಷಣ ಹೊರಟುಬಿಡುತ್ತಿದ್ದರು,ಹಾಸ್ಯ ಕಾರ್ಯಕ್ರಮಗಲಿದ್ದರೂ ಅಷ್ಟೇ,ಬಿಡುವು ಸಿಕ್ಕಾಗೆಲ್ಲ ಉತ್ಸಾಹದಿಂದ ಭಾಗವಹಿಸಿ ನೆರೆದವರೆದುರು ತಮ್ಮ ಸ್ಫುಟವಾದ ಮಾತುಗಳ ಮೂಲಕ ನಗೆಯ ಹೊಳೆಯನ್ನೇ ಹರಿಸಿ ಬಿಡುತ್ತಿದ್ದರು.

ಸಿನಿಮಾ,ಕಿರುತೆರೆಗಳಲ್ಲಿ ತಾವೆಷ್ಟೇ ಬಿಜಿಯಾಗಿದ್ದರೂ ರಂಗಭೂಮಿಯ ಮೇಲೆ ಮಾತೃಸಂಬಂಧ ಹೊಂದಿದ್ದರೆಂಬುದಕ್ಕೆ ಸಾಕ್ಷಿ ಅವರು 'ರೂಪಾಂತರ'ದ ಜೊತೆ ಇಟ್ಟುಕೊಂಡಿದ್ದ ಭಾವನಾತ್ಮಕ ಸಂಬಂಧ.'ರೂಪಾಂತರ'ದ ಅಧ್ಯಕ್ಷರಾಗಿದ್ದ ಕರಿಬಸವಯ್ಯನವರು ಸಂಸ್ಥೆಯ ಏಳ್ಗೆಗಾಗಿ ಅವಿರತ ದುಡಿಯುತ್ತಿದ್ದರು.ಅನೇಕ ಮಹತ್ವಾಕಾಂಕ್ಷೆಗಳನ್ನು ಹೊಂದಿದ್ದರು.ಅವುಗಳಲ್ಲಿ ಮುಖ್ಯವಾಗಿ,'ರೂಪಾಂತರ'ದ ಕಲಾವಿದ,ತಂತ್ರಜ್ಞರಿಗೆ ಕೇಂದ್ರ ಸರ್ಕಾರದ ವತಿಯಿಂದ ವಿವಿಧ ಯೋಜನೆಗಳಡಿಯಲ್ಲಿ ಆರ್ಥಿಕ ಸಹಾಯ ದೊರಕಿಸಿ ಕೊಡುವುದು,ಗ್ರಾಮೀಣ ಪ್ರದೇಶಗಳಲ್ಲಿ ಯಥೆಚ್ಚ್ಹವಾದ ರಂಗ ಚಟುವಟಿಕೆಗಳನ್ನ ಹಮ್ಮಿಕೊಂಡು ಯುವಕ-ಯುವತಿಯರಲ್ಲಿ ರಂಗಾಸಕ್ತಿ ಮೂಡಿಸುವುದು,ಹೊಸದಾಗಿ,ವಿಭಿನ್ನವಾಗಿ ಯೋಚಿಸುವ ಹೊಸತಲೆಮಾರಿನ ಯುವ ನಾಟಕಕಾರರಿಂದ ಹೊಸ ಬಗೆಯ ನಾಟಕಗಳನ್ನು ಬರೆಸಿ ರಂಗಕ್ಕೆ ತರುವುದು,ಹಾಗೆಯೇ ಹಿರುಯ ನಾಟಕಕಾರರ ನಾಟಕಗಳಲ್ಲಿನ ದಾರ್ಶನಿಕತೆ,ಜೀವನ ಪ್ರೀತಿ,ವ್ವೈಚಾರಿಕತೆ,ಮಾನವೀಯ ಸಂಬಂಧಗಳ ಕುರಿತು ಅರಿವು ಮೂಡಿಸುವುದು, ಸಮಾಜಮುಖಿಯಾಗಿರುವ ಕಥೆಗಳನ್ನು ಆರಿಸಿಕೊಂಡು ರಂಗರೂಪ ನೀಡುವುದು,ಹಾಗೂ ಕಳೆದ ದಶಕಗಳಲ್ಲಿ 'ರೂಪಾಂತರ' ಸಂಸ್ಥೆ ನಡೆದು ಬಂದ ದಾರಿಯನ್ನೂ,ಏರಿದ ಎತ್ತರವನ್ನೂ ಒಂದು ಕಡೆ ದಾಕ್ಯುಮೆಂಟಾಗಿಸುವುದು ಹಾಗು ನಂತರದ ತಲೆಮಾರಿನ ರಂಗಭೂಮಿಗೆ ಹೊಸ ದಿಕ್ಕು,ಹೊಸ ಚೇತನ ಒದಗಿಸಬೇಕೆಂದು ಕನಸು ಕಂಡಿದ್ದರು.

'ರೂಪಾಂತರ' ಸಂಸ್ಥೆಗೂ ಅಷ್ಟೇ,ಕೆ.ಬಿ.ಯವರೆಂದರೆ ಇನ್ನಿಲ್ಲದ ಪ್ರೀತಿ.ಮೂರು ವರ್ಷಗಳ ಹಿಂದೆಯಷ್ಟೇ ಕರಿಬಸವಯ್ಯನವರ ಜನ್ಮದಿನದಂದು ರವೀಂದ್ರ ಕಲಾಕ್ಷೇತ್ರದಲ್ಲಿ 'ಕತ್ತಲಲ್ಲು ಯಶಸ್ಸಿನ ತ್ರಿಶೂಲ ಹಿಡಿದ ಕಥೆ' -ಎಂಬ ಹೆಸರಿನ ಅಭಿನಂದನಾ ಗ್ರಂಥ ಹೊರತರಲಾಯಿತು.ಕೆ.ಎಸ್.ಡಿ.ಎಲ್.ಚಂದ್ರು ಹಾಗು ನರೇಂದ್ರ ಬಾಬು ಈ ಕೃತಿಯ ಸಂಪಾದಕರು.ವಿಪರ್ಯಾಸವೆಂದರೆ ಅದೇ ರವೀಂದ್ರ ಕಲಾಕ್ಷೇತ್ರ ಆವರಣದ 'ಸಂಸ'ಬಯಲು ರಂಗಮಂದಿರದಲ್ಲೇ ಕೆ.ಬಿ.ಯವರಿಗೆ ಅಂತಿಮ ನಮನ ಸಲ್ಲಿಸಬೇಕಾದ ದುಃಖದ ಸ್ಥಿತಿ ಎದುರಾಯಿತು.

ಕನಕದಾಸರ 'ರಾಮಧಾನ್ಯ' ನಾಟಕ 'ರೂಪಾಂತರ'ದ ವತಿಯಿಂದ ಇಪ್ಪತ್ತ ನಾಲ್ಕು ಪ್ರದರ್ಶನ ಕಂಡಿತ್ತು.ಇಪ್ಪತ್ತೈದನೇ ಅದ್ಧೂರಿ ಪ್ರದಶನಕ್ಕಾಗಿ ಕರಿಬಸವಯ್ಯನವರು ತಂಡದೊಂದಿಗೆ ಸಮಾಲೋಚನೆ ನಡೆಸಿ ಮಹತ್ವಾಕಾಂಕ್ಷೆಯ ಯೋಜನೆ ರೂಪಿಸಿದ್ದರು.ಅಷ್ಟರಲ್ಲಿ ಅವರನ್ನು ಕಳೆದುಕೊಂಡಿದ್ದೇವೆ.ಇವರ ಮುಂದಾಳತ್ವದಲ್ಲಿ ಸಜ್ಜುಗೊಂಡಿದ್ದ ಇಟಗಿ ಈರಣ್ಣನವರ 'ಯಹೂದಿ ಹುಡುಗಿ' ನಾಟಕ ಕಳೆದ ವಾರವಷ್ಟೇ ಮುಂಬಯಿಯಲ್ಲಿ ನಡೆದ 'ಅಖಿಲ ಭಾರತ ಕುವೆಂಪು ಸ್ಮಾರಕ ನಾಟಕ ಸ್ಪರ್ಧೆ'ಯಲ್ಲಿ ಮೊದಲನೇ ಬಹುಮಾನ ಪಡೆದಿತ್ತಲ್ಲದೆ ವಿವಿಧ ವಿಭಾಗಗಳಲ್ಲಿ ಒಟ್ಟು ಏಳು ಪ್ರಶಸ್ತಿಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿತ್ತು.ಆ ಸುದ್ಧಿ ಕೇಳಿ ಕರಿಬಸವಯ್ಯ ಸಂತಸ ವ್ಯಕ್ತ ಪಡಿಸಿದ್ದರು.ಅದು ಹೆಚ್ಚು ಕಾಲ ಉಳಿಯಲಿಲ್ಲ.

ಇನ್ನು ಪ್ರಶಸ್ತಿಗಳ ವಿಷಯಕ್ಕೆ ಬಂದರೆ,ಕೆ.ಬಿ.ಯವರಿಗೆ 'ಕೊಟ್ರೇಶಿ ಕನಸು'ಚಿತ್ರದ ಅದ್ಭುತ ಅಭಿನಯಕ್ಕಾಗಿ ರಾಜ್ಯಪ್ರಶಸ್ತಿ ಪಡೆದಿದ್ದಾರೆ.ಆದರೂ ಇವರ ಪ್ರತಿಭೆಗೆ ಸಿಗಬೇಕಾದ ಗೌರವ,ಸ್ಥಾನಮಾನ ಸಿಗಲಿಲ್ಲವೆಂದೇ ಹೇಳಬಹುದು.ಕಳೆದ ಸಾಲಿನ 'ರಾಜ್ಯೋತ್ಸವ ಪ್ರಶಸ್ತಿ'ಗಾಗಿ ರೂಪಿಸಿದ್ದ ಪಟ್ಟಿಯಲ್ಲಿ 'ಕನ್ನಡ ಮತ್ತು ಸಂಸ್ಕೃತಿ ಇಲಾಖೆ ' ಕರಿಬಸವಯ್ಯನವರ ಹೆಸರನ್ನೂ ಸೇರಿಸಿತ್ತಾದರೂ ಕೆಲವು ಒಳ ಒಪಾಂದ ಅರ್ಥಾತ್ ಲಾಬಿಗಳಿಂದಾಗಿ ಕೆ.ಬಿ. ಪ್ರಶಸ್ತಿ ವಂಚಿತರಾದರೆಂದು ಅಲ್ಲಲ್ಲಿ ಕೇಳಿಬಂತು.ಅದೇ ರೀತಿ,'ನಾಟಕ ಅಕಾಡೆಮಿ'ಯೂ ಕೂಡ ಕರಿಬಸವಯ್ಯನವರನ್ನ ನಿರ್ಲಕ್ಷಿಸಿತೆಂದೇ ಹೇಳಬಹುದು.ಯಾರು ಪ್ರಶಸ್ತಿ ಕೊಟ್ಟರೂ,ಕೊಡದಿದ್ದರೂ ಕೆ.ಬಿ.ಯಂತಹ ಮಹಾನ್ ಕಲಾ ತಪಸ್ವಿ ಕನ್ನಡಿಗರ ಹೃದಯದಲ್ಲಿ ಶಾಶ್ವತವಾಗಿ ಉಳಿದು ಹೋದರು.ಅಷ್ಟು ಸಾಕು.

'ರೂಪಾಂತರ' ಸಂಸ್ಥೆ ಕೆ.ಬಿ.ಯಾರ ಹೆಸರಿನಲ್ಲಿ ಒಂದು ರಂಗ ಪುರಸ್ಕ್ರಾರ ನೀಡುವ ಉದಾತ್ತ ಯೋಜನೆ ಕೈಗೊಂಡಿರುವುದು ನಿಜಕ್ಕೂ ಒಳ್ಳೆಯ ಆಲೋಚನೆ.ಅದೇ ರೀತಿ ಅವರ ಹೆಸರಿನಲ್ಲಿ ನಾಟಕೋತ್ಸವದಂತಹ ಸ್ವಾಗತಾರ್ಹ ಯೋಜನೆಗಳನ್ನೂ ರೂಪಿಸುತ್ತಿರುವುದು ಮೆಚ್ಚುವಂಥದ್ದು.ಒಳಜಗಳಗಳಲ್ಲಿಯೇ ಮುಳುಗಿರುವ ಸೋ ಕಾಲ್ಡ್ ಸರ್ಕಾರ ಕಲಾವಿದರಿಗೆ ಗೌರವ ನೀಡುವುದನ್ನ 'ರೂಪಾಂತರ'ದವರಿಂದ ಕಲಿತುಕೊಳ್ಳಲಿ.ನಾಯಕ ನಟರು ಸತ್ತಾಗ ವಹಿಸುವ ಕಾಳಜಿ ಪೋಷಕ ನಟರ ಮೇಲೂ ಇರಲಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ