ಶುಕ್ರವಾರ, ಜುಲೈ 29, 2011

ಕಸಿವಿಸಿ ಕನಸು

ಎತ್ತೆತ್ತಲು ಮೆತ್ತಿಹ ಮನುಜನ ಬಾಡು
ರಣಲೋಕದ ಕಿಡಿ ಕಿಡಿ ಸುಡುಗಾಡು
ಸೊಕ್ಕಿಗೆ ಸಿಕ್ಕಿ ದಿಕ್ಕೆಟ್ಟಿಹ ಜಗ
ಉರಿವುದು ಕಾಣದೊ ಮೃತ್ಯುವು ಧಗಧಗ
ಅಗ್ನಿಯ ಅಪ್ಪುಗೆ ಆವರಿಸೆ ಜಗವ
ದಿಕ್ಕೆಟ್ಟಿಹ ಗತ್ತಿಲ್ಲದ ಮಾನವ
ಮುಗಿಲಿಗು ನೆಲಕೂ ಅಂತರವಿಲ್ಲ
ಸಿಡಿಮದ್ದುಗಳುಗುಳುವ ಹೊಗೆಯೇ ಎಲ್ಲ
ಪಸರಿಸಲೆಲ್ಲೆಡೆ ಪರಮಾಣುವಿನಲೆ
ಗುರಿಗಳಿಲ್ಲದೆ ಗುಡಿಗಿಹ ಧಾಂದಲೆ

ಅಂಗಗಳೆರಚಿವೆ ಸುತ್ತಲ ನೆಲದಲಿ
ರಂಗವು ತುಂಬಿದೆ ರಂಗಿನ ದ್ರವದಲಿ
ಸಾಗರ ನಿಲ್ಲದು ಒಂದೆಡೆಯೂರಿ
ಹರಿದಿದೆ ಎಲ್ಲೆಡೆ ನಗರದಿ ತೂರಿ
ತೇಲಿಹ ತನುಗಳು ಅರಚಿಹ ಮನಗಳು
ಅಲೆಗಳ ನಡುವಲಿ ಅಲೆದಿಹ ಜನಗಳು
ಮನೆಮಠವೆಲ್ಲವು ಮಸಣದ ತೆರದಿ
ಮಂಗಳವಾಡಲು ಮರಣದ ಸರದಿ
ಸದ್ದಿಲ್ಲದೆ ಸವೆದಿದೆ ಜೀವದ ಹಿಂಡು
ಗದ್ದಲ ಮರೆಸಿದೆ ಉಸಿರಿನ ಗುಂಡು

ಕೆಲವೇ ಕೆಲವೆಡೆ ಮನುಜನ ಬಳಗ
ಸೃಷ್ಟಿಯು ಚೆಲ್ಲಿತು ವೇದನೆ ಕೊರಗ
ಮೌನದಿ ಮಲಗಿಹ ಮಂದಣ ಲೋಕ
ಹೊಗೆಯಾಡುತಿರೆ ಎಲ್ಲೆಡೆ ಶೋಕ
ದೂರದಿ ನಿಂದು ಕಾಲನು ನಗುತಿರೆ
ಬಿಡಿಬಿಡಿ ಬಿಡಿಸಿದೆ ಸಿಟ್ಟಿನ ಹೊರಪೊರೆ
ತೆಪ್ಪಗೆ ತೆವಳಿದೆ ಶಾಂತದಿ ಧರೆಯು
ಸಪ್ಪಗೆ ಮಲಗಿದೆ ಗರ್ವದ ಧಗೆಯು
ಮೂಡಣದಲಿ ಹೊಸ ಸೂರ್ಯನ ಉದಯ
ಫಳ್ಳನೆ ಅರಳಿತು ಮಾನವ ಹೃದಯ

ಭಾನುವಾರ, ಜುಲೈ 24, 2011

ಕೊಚ್ಚೆ ನೀರ ಮೀನು

ಸಣ್ಣ ಬೀಜದಲಿ
ಅಡಗಿ ಕುಳಿತ ಮರ
ಕಣ್ಣು ಬಿಡದ ಬುದ್ಧ.
ದಟ್ಟ ಮೋಡದಲಿ
ಗುರುತೆ ಸಿಗದ ಹನಿ
ಚಿಪ್ಪಿನೊಡಲ ಬೆಳಕು.

ತತ್ತಿ ಗರ್ಭದಲಿ
ಬೆಚ್ಚಗಿರುವ ದ್ರವ
ಹಾರುವೆದೆಯ ತವಕ.
ಜಾವದಿಬ್ಬನಿಯ
ತೇವದಧರದಲಿ
ಉದಯದುಷೆಯ ಮೋಕ್ಷ.

ಸತತ ಕಾಲ್ತುಳಿತ
ಸಹಿಸಿ ನಗುವ ಪೊದೆ
ಕಡೆಗೆ ದಿವ್ಯ ದಾರಿ.
ತೊಗಲ ಜಾಲದಲಿ
ಸಿಲುಕಿದೀ ಆತ್ಮ
ಕೊಚ್ಚೆ ನೀರ ಮೀನು.

ಬುಧವಾರ, ಜುಲೈ 20, 2011

ಸುರಿಯಿತು ಬಿರುಮಳೆ

ಧೋ ಧೋ ಎನ್ನುತ ಸುರಿಯಿತು ಬಿರುಮಳೆ
ತಣ್ಣಗೆ ಮಲಗಿಸಿ ಕೆಂಧೂಳ
ಫಳಫಳ ಮಿಂಚಿನ ಆರತಿ ಎಲ್ಲೆಡೆ
ಢಂ ಢಂ ಗುಡುಗಿನ ಹಿಮ್ಮೇಳ

ಮರಗಿಡ ಬಳ್ಳಿಗೆ ಬೆಟ್ಟ ಕಲ್ಬಂಡೆಗೆ
ಸ್ನಾನ ಮುಗಿಸಿದ ಸಮಾಧಾನ
ಕಪ್ಪೆಯು ಮೆಲ್ಲಗೆ ಹೇಳಿತು ಮೀನಿಗೆ
ಹೊಸ ನೀರಲಿ ಬಾ ಈಜೋಣ

ನೆಲದಾ ಪರದೆಯ ಸರಿಸುತಾ ಬೀಜ
ಇಣಕಿದೆ ಗಗನಕೆ ಮುಖಮಾಡಿ
ಬಾ ಬಾ ಎನ್ನುತ ಬಿಸಿ ಕೈ ಚಾಚಲು
ಸೂರ್ಯನು ಎಡಬಲ ಎಲೆನೀಡಿ

ಹಿತ್ತಿಲಲಿ ಮೈ ಕಾಯಿಸಿಕೊಳುತಿದೆ
ಮಕ್ಕಳ ಮಣ್ಣಿನ ಗಣಪಯ್ಯ
ಕೆಸರಲಿ ತಕ ಥೈ ಎಳೆಪಾದಂಗಳು
ತಾತ ನೋಡದಿರಲಿ ದಮ್ಮಯ್ಯ

ಬಯಲು ಮತ್ತು ಬೇಲಿ

ಎಷ್ಟೊಂದು ಅನ್ಯೋನ್ಯ
ಬಯಲು ಬೇಲಿ
ನೆಟ್ಟ ಕೈಗೊಂದಿಷ್ಟು
ಪುಣ್ಯ ಬರಲಿ

ಅತ್ತಿತ್ತ ದಾಯಾದಿ
ಸ್ವಾರ್ಥ ಕಾವು
ನಡುವೆ ಬೇಲಿಯ ತುಂಬ
ನೀಲಿ ಹೂವು

ಭೂಪಟದ ಮೇಲಷ್ಟೆ
ದೇಶ ದೇಶ
ಬಯಲು ಬಲ್ಲುದೆ ಹೇಳು
ಭಿನ್ನ ಮನಸ

ಶುಕ್ರವಾರ, ಜುಲೈ 15, 2011

ಹಸಿರು ಗಿರಿಯ ತಪ್ಪಲಲ್ಲಿ

ಹಸಿರು ಗಿರಿಯ ತಪ್ಪಲಲ್ಲಿ 
ನಿಂತ ಬಿದಿರ ಬೊಂಬಿಗೆ 
ಕೃಷ್ಣ ಬಂದೆ ಬರುವನೆಂಬ
ದಟ್ಟವಾದ ನಂಬುಗೆ 

ಗೋವುಗಳನು ಮೇಯ ಬಿಟ್ಟು
ನೋಡದಿರನು ತನ್ನನು
ಸನಿಹ ಬಂದು ಒಲವ ಬೆರೆಸಿ
ಮಾಡದಿರನು ಕೊಳಲನು

ಊದಿ ಗೋವುಗಳನು ಕೂಗಿ
ಮಾಡಿಕೊಡುವ ಪರಿಚಯ
ನೆಗೆದು ಬರುವ ಕರುಗಳಲ್ಲಿ
ಥೇಟು ಅವನ ಅಭಿನಯ 

ರಾತ್ರಿ ರಾಧೆ ತೊಡೆಗೆ ಒರಗಿ
ಹರಿಸದಿರನು ನಾದವ
ಅವಳ ನಿದಿರೆ ಕೆಡಿಸಬಲ್ಲ  
ಮೋಡಿಗಾರ ಮಾಧವ 


ಗುರುವಾರ, ಜುಲೈ 14, 2011

ಅವಳ ಅವನು

ಕುಡಿಮೀಸೆ ತುಂಟನಗೆ ದಿಟ್ಟ ನಿಲುವು
ಕಿಚ್ಚಿಡುವ ಕಂಗಳಲಿ ತುಂಬಿದೊಲವು;
ಎದೆ ತೊಟ್ಟಿಲಲಿ ನಾನು ಪುಟ್ಟ ಮಗುವು
ನನ್ನವನ ತೆಕ್ಕೆಯಲಿ ನನ್ನ ಜಗವು.

ನಡುದಾರಿಯಲಿ ಒಮ್ಮೆ ಸಿಕ್ಕಿದವನು
ಜಡಗೊಂಡ ಜೀವವನು ಹೊಕ್ಕಿದವನು;
ತೊರೆಯಾಗಿ ನನ್ನೊಳಗೆ ಉಕ್ಕಿದವನು
ಕೊರಳೆಣೆದು ಕೊರಳಿಗೆ ತಾ ಬಿಕ್ಕಿದವನು.

ಅತಿ ಪ್ರೀತಿ ಮಿತ ಮಾತು ಭಾವ ಜೀವಿ
ತಾಯ್ಮಮತೆ ಹೆಂಗರುಳು ತುಂಬಿದರವಿ;
ಬೊಟ್ಟಿಟ್ಟು ಬೈತಲೆಗೆ ಹೂವ ಮುಡಿಸಿ
ಹಣೆ ಮೇಲೆ ತುಟಿ ಮುದ್ರೆ ಬಾಷ್ಪ ಬೆರಿಸಿ.

ದೀಪವನು ಊದುವನು ತೋಳ ಬಳಸಿ
ಸೀರೆ ಕುಪ್ಪಸಗಳಿಗು ಜೋಮು ಹಿಡಿಸಿ;
ಅದೆ ಕೋಣೆ ಅದೆ ಮಂಚ ರಾತ್ರಿ ಹೊಸದು
ಅಚ್ಚರಿಯ ಹಚ್ಚುವನು ಮೈಯ ಮಸೆದು.

ತುಂತುರು ಮಳೆ

ಕಿಟಕಿಯಾಚೆ ತುಂತುರು ಮಳೆ ಎದೆಯ ತುಂಬ ನೆನಪು
ತಣ್ಣನೆ ಹವೆ ಸೂಸುತಿರಲು ಅವಳ ಉಸಿರ ಕಂಪು

ಕಾರ್ಮುಗಿಲ ಜಗಲಿ ಮೇಲೆ ಅವಳ ದಟ್ಟ ಹೆರಳು
ಹನಿಯನುಟ್ಟ ಹೂವ ಪಕಳೆ ಚಿನ್ನದುಗುರ ಬೆರಳು

ಒದ್ದೆ ನೆಲದ ಕುರಿಯ ಹೆಜ್ಜೆ ಕೊಡದೆ ಉಳಿದ ಮುತ್ತು
ಕೊಳದ ತರತರಂಗ ಚಕ್ರ ಅವಳ ನೆರಳ ಗಸ್ತು

ಕಮಲದೆಲೆಯ ನೀರ ಗೋಲಿ ಹೊಳೆವ ತುಂಟ ಕಣ್ಣು 
ಏಳು ಬಣ್ಣದಾ ಬಿಲ್ಲಿನೊಳು ನಿಂತಳೇಕೆ ತಾನು

ಮಳೆಯ ಹನಿಗು ಕಣ್ಣ ಹನಿಗು ನಡುವೆ ಇರುವುದೇನು
ಅವಳೆ ಬಂದು ಹೇಳಬೇಕು ಕಾಯುತಿರುವೆ ನಾನು 


ಶುಕ್ರವಾರ, ಜುಲೈ 1, 2011

ಮಾನಸ ಸರೋವರ

ಮೈ ಚಾಚಿ ಮಲಗಿದ್ದ ಮನಸು
ಒಂದು ಸರೋವರ.

ಪಡುವಣ ಸೂರ್ಯನ ಚಿನ್ನದ ಕೋಲು
ತಿವಿಯುತಿತ್ತು ಬೆಚ್ಚಗೆ
ಮೌನದಲೆ
ಗಳಿಗೆ.

ರಾತ್ರಿ ಚಂಡಮಾರುತ;ಒಳಗೆಲ್ಲ
ಡುಬು ಡುಬು ಡುಬು,ಹೊರಗೆಲ್ಲ
ಪರ ಪರ ಪರ.

ಚಂದ್ರ,ನಕ್ಷತ್ರ-
ಇಂಥವರೆಲ್ಲ ಆಡಿಕೊಂಡು
ನಕ್ಕರು,ಬಿಚ್ಚಿ ಬಿಸಾಕಿ
ನಿಕ್ಕರು.

ಮೀನಾದಿ ತಿಮಿಂಗಿಲ,ಮೊಸಳೆ ಮಕ್ಕಳು
ಮರಿ ಕಳೆದುಕೊಂಡು ರೋಧಿಸಿದವು.

ನಡುಗಡ್ಡೆಗಳು ನಡು
ನಡುಗಿ,
ಹಡಗುಗಳು ಗಡ ಗಡ
ಗಾಬರಿ.ಬಂಡೆಗಳು ಬಿಕ್ಕಳಿಸಿ,ಜಲಚರ
ಗಳಿಗೆ
ಜಲ ಜಲ ಬೆವರ್ಜಳಕ.

ಜಾವದ ಹೊತ್ತಿಗೆ ನಿರಾಳ ಭೇದಿ
ನಿಂತ ಹೊಟ್ಟೆಯಷ್ಟೇ.

ಚಂದ್ರ,ನಕ್ಷತ್ರ
ಮುಖ ಮುಖ ನೋಡುತ ಗಂಭೀರವಾಗಿ
ಕಾಣೆಯಾದರು.

ಮೂಡಣ ಸೂರ್ಯನ ಚಿನ್ನದ ಕೋಲು
ತಿವಿಯುತಿತ್ತು ನಚ್ಚಗೆ
ರಾತ್ರಿ ಪೂರ ನಿದ್ದೆಗೆಟ್ಟು ಮಲಗಿದ್ದ ಅಲೆ
ಗಳಿಗೆ.

ಮೈ ಕೊಡವಿ ಮೇಲೆದ್ದ ಮನಸು
ಬೇರೊಂದು ಸರೋವರ.