ಶನಿವಾರ, ಮೇ 21, 2011

ಬದುಕು ಹುಚ್ಚುಹೊಳೆಯು

ಬದುಕು ಹುಚ್ಚು ಹೊಳೆಯು
ಪ್ರೀತಿ ಸುಂದರ ಸುಳಿಯು
ಕನಸುಗಣ್ಣುಗಳಲ್ಲಿ ಉಪ್ಪು ಪನ್ನೀರು.
ಸಾವಿಗೆದುರಿನ ಯಾನ
ರೂಢಿಯಾಗಿಹುದಣ್ಣ
ಅವಳಿದ್ದ ಕಡೆಗಿರಲಿ ನಿತ್ಯ ಹೊಂದೇರು.

ಶವದ ಮೇಲಿನ ಹೂವು
ತರುವ ಪರಿಮಳ ಸೋಕೆ
ಎಂಥ ಮೈಲಿಗೆ ಹೇಳು ರುದ್ರ ಭೈರವಗೆ?
ಬೆಳ್ಳಿ ಬಟ್ಟಲಿನಲ್ಲಿ
ಕಳ್ಳಿ ಹಾಲನು ಕುಡಿಸಿ
ಹೋದ ಪ್ರೇಯಸಿ ಹೊಣೆಯೆ ಬೆಂದ ನನ್ನೆದೆಗೆ?

ನೀರು ಇಂಗದ ವಿನಃ
ತೀರ ಸೇರವು ಸನಿಹ
ಹಣ್ಣಾಗದಿರೆ ಹೆಣ್ಣು ಕಣ್ಣು ತೆರೆಯುವಳೆ?
ನೆತ್ತಿ ಮೇಲಿನ ಸಾಲು
ಉತ್ತರವ ಮರೆತಿರಲು
ಹೂತ ಭಾವನೆಗಳಿಗೆ ಎಲ್ಲಿ ಜೀವಕಳೆ?

ಗುರುವಾರ, ಮೇ 19, 2011

ಆದಿತ್ಯ ದರ್ಶನಂ

ಮುಗಿಲ ಗೋಪುರಗಳೆಡೆಯೊಳ್ ಥಳಥಳಿಸಿ ಮಿನುಗಿಸಿ ಅಗ್ನಿಜ್ವಾಲೆ
ಅದೆನಿತೆನಿತು ರೂಪಂಗಳೊoದಿಹೆ ಆವ ಉದರದೊಳು ಹುಟ್ಟಿ?
ಕ್ಷಣದೊಳ್ ಮುತ್ತಿಟ್ಟು ಹೊರಗಟ್ಟಿ ಧಗಧಗಿಪೆ ಹೇ ಜಗಜ್ಯೋತಿ
ಮುದ್ದಿಸಲಾಗಮಿಸಲೆನ್ನ ನೇತ್ರಗೊಂಬೆಯ ದಿಟ್ಟಿ !
ತುಸು ಸರಿದು ಮರೆಯಾಗಿ ಸರಿದೋಡಲು ಮುಗಿಲ ಸಾಲುಗಳ್
ರಸರೌದ್ರಗೆಂಡನಾದೊಡಮೇನ್
ದೆಸೆದೆಸೆಗಳ್ಗತ್ತಲೆಯನೆತ್ತಿ ನವಬೆಳಕ ಬೀರದಿರ್ದೊಡೆ ?
ಇಹುದೆನಗೆ ನಂಬುಗೆಯು ಆರೆಂಬುದು ನೀ-
ಭಾವಲೋಕದ ಭಾವಾಗ್ನಿಯೇ
ಬಾರೆನ್ನ ಮನದಿ ನೆಲೆಸು!

ಮಂಗಳವಾರ, ಮೇ 17, 2011

ಸಂಜೆಯಾಗುತಿದೆ

ಸಂಜೆಯಾಗುತಿದೆ ಹೊರಡು ಬೇಗನೆ
ಸಾಗಬೇಕು ದೂರ
ತವರು ಬೆಚ್ಚಗಿದೆ ಎಂದು ಕೂರದಿರು
ಸೇರಬೇಕು ಊರ

ಉಟ್ಟ ಸೀರೆಯಿದು ಒಪ್ಪುವಂತಿದೆ
ತೊಟ್ಟ ಬಳೆಯೆ ಸಾಕು
ಹೊತ್ತು ಮುಳುಗುತಿದೆ ಕತ್ತಲಾಗುತಿದೆ
ಬೆಟ್ಟ ಇಳಿಯಬೇಕು

ಬಿಸಿ ರವೆಯುಂಡೆ ಸಿಹಿ ಒಬ್ಬಟ್ಟು
ತುಪ್ಪ ಕರ್ಜಿಕಾಯಿ
ಹದವ ಮಾಡಿ ಕಟ್ಟಿಹಳು ಬುತ್ತಿ
ಪ್ರೀತಿ ಬೆರೆಸಿ ತಾಯಿ

ಹುಟ್ಟಿದಮನೆ ಅಲ್ಲ ಶಾಶ್ವತ
ಪತಿಯೆ ಸತಿಗೆ ಸೂರು
ಕೈಯ ಹಿಡಿದವನ ಬಾಳ ಜಾತ್ರೆಯಲಿ
ಮಡದಿ ತಾನೆ ತೇರು