ಸೋಮವಾರ, ಏಪ್ರಿಲ್ 25, 2011

ಅವ್ವನಿಗೊಂದು ಜೋಗುಳ

ಹಾಸಿಗೆ ಹಾಸಿವ್ನಿ ಬೀಸಣಿಗೆ ತಂದಿವ್ನಿ
ಕೂಸಂಗೆ ಮಲಗು ಕಣ್ಮುಚ್ಚಿ /ನನ್ನವ್ವ
ಬ್ಯಾಸರಕೀ ನನ್ನ ಪದ ಕೇಳು //

ಗಂಭೀರದಲಿ ಆನೆ ಅಂಬಾರಿ ಹೊರುವಂಗೆ
ಒಂಭತ್ತು ತಿಂಗಾಳು ಹೊತ್ತೆನ್ನ /ತಿರುಗಾಡಿ
ತುಂಬಿದೂರಿಗೆ ತಂದು ನೀ ಬಿಟ್ಟೆ //

ನೆತ್ತಿ ಸುಡೊ ಬಿಸಿಲಾಗೆ ಸುತ್ತಿ ಸೆರಗ ತಲೆಗೆ
ಹೊತ್ತಾರಿಂದ ಸಂಜೆ ತನಕ /ನೀ ದುಡಿದು
ತುತ್ತುಣಿಸಿ ಮಲಗಿದೆ ನೀ ಹಸಿದು //

ಪೋಲಿ ಹೈಕಳ ಸಂಗ ಗೋಲಿ ಗೆಜ್ಜುಗ ಹಿಡಿದ
ಚಾಳಿಯ ಬಿಡಿಸಿ ಬುದ್ವಾದ /ನೀ ಹೇಳಿ
ಶಾಲೆಗಾಕಿ ಬೆಳಕ ತೋರಿಸಿದೆ //

ರೆಕ್ಕೆ ಬಲಿತ ಹಕ್ಕಿ ಸೊಕ್ಕಿ ಹಾರೋವಂಗೆ
ದಿಕ್ಕೆಟ್ಟು ಸುತ್ತಿ ಪರಪಂಚ /ಬಂದಿವ್ನಿ
ಮುಕ್ಕಾಗದ ಪ್ರೀತಿ ನಿನದೊಂದೆ //

1 ಕಾಮೆಂಟ್‌:

  1. ಹ್ರದಯ ಶಿವ ಹ್ರದಯ೦ಗಮ ಹ್ರದಯಕ್ಕೆ ಹತ್ತಿರವಾದ ಹ್ರದಯವನ್ನ ನವಿರಾಗಿ ತಟ್ಟಿದ ಹಾಡು... ವಾಹ್

    ಪ್ರತ್ಯುತ್ತರಅಳಿಸಿ