ಗುರುವಾರ, ಸೆಪ್ಟೆಂಬರ್ 30, 2010

ಅಯೋಧ್ಯ

ಭಾರತಾಂಬೆಯ ಅಯೋಧ್ಯ
ಯುದ್ಧ ಭೂಮಿಯಲ್ಲ,
ಧರ್ಮಕಿಂತ ದೇಶ ಮುಖ್ಯ
ಬದ್ಧರಾಗಿ ಎಲ್ಲ.

ರಾಮನೊಡನೆ ಕುಳಿತು ಊಟ
ಮಾಡಿದವರು ಇಲ್ಲ,
ಅಲ್ಲನೊಡನೆ ಮಸೀದಿಯಲಿ
ಆಡಿದವರು ಇಲ್ಲ.

ಇಟ್ಟ ಹಣೆಯ ತಿಲಕ ಕರಗಿ
ಹೋಗುವಂಥ ಬಣ್ಣ,
ಬಿಟ್ಟ ಗಡ್ಡ ಬಿಳಿಯ ಟೋಪಿ
ತಂದು ಕೊಡವು ಅನ್ನ.

ಶ್ಲೋಕಕಿಂತ ಬಾಳ್ವೆ ಮುಖ್ಯ
ದುಡಿಮೆಯೊಂದೆ ದೈವ,
ಕೂಗುವ ನಮಾಜಿಗಿಂತ
ಮಿಗಿಲು ಭ್ರಾತೃ ಭಾವ.

ಶಾಂತಿಯ ಬುನಾದಿ ಮೇಲೆ
ಕಟ್ಟಬೇಕು ರಾಜ್ಯ,
ಕ್ರಾಂತಿಯಿಂದ ನಿನ್ನ ಪತನ
ಬೇಡ ವ್ಯರ್ಥ ವ್ಯಾಜ್ಯ.

ಕರಗಿ ಹೋಗೊ ಹಿಮದ ಹಾಗೆ
ನಿನ್ನ ಪುಟ್ಟ ಬದುಕು,
ಕರಗೊ ಮುನ್ನ ನಿನ್ನ ಒಳಗೆ
ನೀನೆ ನಿನ್ನ ಹುಡುಕು.