ಗುರುವಾರ, ಜೂನ್ 24, 2010

ಕಮರಿದ ನಂಟು

ಕಮರಿದ ನಂಟು


ಒಂದು ಸುಂದರ ನಂಟು ಕಮರಿತು ದ್ವೇಷರೋಷದ ಧಗೆಯಲಿ

ಒಂದು ಯಾನವು ನಿಂತುಬಿಟ್ಟಿತು ಸೋತ ಹೆಜ್ಜೆಯ ನೆರಳಲಿ !


ಎಲ್ಲೊ ಸಂಧಿಸಿ ಏನೊ ಬಂಧಿಸಿ ಒಂದುಗೂಡಿದ ಸ್ನೇಹವು

ಹಗೆಯ ಹೊಗೆಯಲಿ ಕಣ್ಣನುಜ್ಜಲು ಕಂಡ ಸಂತಸ ಮಾಯವು !


ಮುನಿದ ಎದೆಯಲಿ ತುಂಬಿ ತುಳುಕಿದೆ ಬಾಚಿ ತಬ್ಬಿದ ಬೇಸರ

ಧಮನಿ ಧಮನಿಯ ಸುತ್ತಿಕೊಂಡಿದೆ ರಕ್ತ ಹೀರುವ ನಾಗರ !


ಮೊದಲ ಭೇಟಿಯೇ ಕಡೆಯ ಭೇಟೀ ಅಷ್ಟೆ ಜೀವಕೆ ಸಾಂತ್ವನ

ಚಿಗುರ ಬೆನ್ನಲೆ ಹಳದಿ ಹಣ್ಣೆಲೆ ಇಷ್ಟೆ ಅಲ್ಲವೆ ಜೀವನ ?


ಒಂದು ಗುಟ್ಟನು ಮುಚ್ಚಲೋಸುಗ ನೂರು ಮಾತಿಗೆ ಕಾರಣ

ಒಂದು ಸುಳ್ಳನು ಸಾಕಿಕೊಳ್ಳಲು ವ್ಯರ್ಥ ಸಲ್ಲದ ಭಾಷಣ !


ಕರಗಿ ಹೋಗುವ ಕ್ಷಣಿಕ ಬಾಳ್ವೆಯು ನಗದೆ ಹೋದರೆ ಸೂತಕ

ತೂಗಿ ಅಳೆವುದೆ ಕೇಳಿ ಪಡೆಯುವ ಪರರ ಹೊಗಳಿಕೆ ಮಾಪಕ ?


ಒಂದು ಸುಂದರ ನಂಟು ಕರಗಿತು ಮಿಂಚಿನಂತೆ ಕ್ಷಣದಲಿ

ಒಂದು ಯಾನವು ಸುಸ್ತುಗೊಂಡಿತು ಹಾದಿ ಮರೆತ ನೆವದಲಿ !