ಮಾತಾಡು ಚಪ್ಪಲಿಯೇ, ಏಕೀ ಮೌನ?
ಹೊಸ್ತಿಲಿನಾಚೆಗಿನ ಕತ್ತಲಲ್ಲಿ ಕಣ್ಮಿಟುಕಿಸುತ
ಉಂಗುಷ್ಟದಲ್ಲೇಕೆ ನಿಟ್ಟುಸಿರು ಬಿಡುವೆ ಹೇಳು.
ಬಿದ್ದ ಮಳೆಗೆ ದಾರಿಯ ಧೂಳು ಒದ್ದೆಯಾಗಿದ್ದಕ್ಕೆ?
ಒಡೆದ ಹಿಮ್ಮಡಿ ನಿನ್ನ ಹೆಗಲ
ಸವೆಸಿದ್ದಕ್ಕೆ ಇಷ್ಟೊಂದು ಹಠವೇ?
ಮೊನ್ನೆ ಹಸಿರ್ಗಾಲದಲ್ಲಿ ಕಣ್ಬಿಟ್ಟ
ಬೇಲಿ ಹೂ ಮುಡಿವವರಿಲ್ಲದೆ ಮಡಿದು
ಅನಾಥವಾಯಿತೆಂದು ಕಣ್ಣೀರಿಡುತ್ತಿರುವೆಯಾ
ಅಥವ ಮಣ್ಣಲ್ಲಿ ಬಿದ್ದು ಹೊರಳಾಡಿದ
ಅದರ ಶವ ತುಳಿದುಬಿಟ್ಟೆನಲ್ಲ
ಎಂಬ ಪಶ್ಚಾತಾಪವೇ? ತಪ್ಪು ನಿನ್ನದಲ್ಲ ಬಿಡು.
ನೀನು ಯಾವ ಪ್ರಾಣಿಯ
ಚರ್ಮ? ಪಾಪ ನಿನಗೇನು ಗೊತ್ತು.
ಹೊದ್ದು ನಿನ್ನನ್ನು ತಿರುಗಾಡುತ್ತಿದ್ದ ಅದನ್ನು
ಕೊಂದು ನಿನಗೀರೂಪ ಕೊಟ್ಟರು ಈ ನಾಗರೀಕರು
ತಮ್ಮ ತೆವಲಿಗಾಗಿ.
ಮೈ ತುಂಬ ಮೊಳೆ ಜಡಿಸಿಕೊಂಡರೂ
ನೀನು ಮುಟ್ಟಾದ ಹೆಂಗಸಿನಂತಾದೆ ಎನ್ನುವ ಕೊರಗೆ?
ನಿನಗೆ ಮಾತು ಬರುವುದಿಲ್ಲ-ಅದು
ನಿನ್ನ ದುರ್ದೈವ; ಮೆಟ್ಟಿ ನುಗ್ಗುವವನ ಕಳ್ಳದಾರಿ,
ಸೂಳೆಗೇರಿ,ಮದ್ಯದಂಗಡಿಯ ಗಬ್ಬಿನಲ್ಲಿ
ಕಾದು ಕಾದು ನಿತ್ರಾಣಗೊಂಡ
ನೀನಿಂದು ವಿಶ್ರಾಂತಿ ಪಡೆಯುತ್ತಿರುವೆಯಾ
ಅಥವ ಪಾಳಿಯಿಲ್ಲದ ದುಡಿಮೆಗಾಗಿ
ಕೂಲಿ ಕೇಳಲು ಕಾದಿರುವೆಯಾ?
ಹೇಳು ಪಾದಗಳ ಪಲ್ಲಕ್ಕಿಯೇ.
ನೀನು ಚಪ್ಪಲಿಯೋ,ಚಕ್ಕಳವೋ,ಕಾಲದ ರುಜುವೋ?
ಹೊಸ್ತಿಲಿನಾಚೆಗಿನ ಕತ್ತಲಲ್ಲಿ ಕಣ್ಮಿಟುಕಿಸುತ
ಉಂಗುಷ್ಟದಲ್ಲೇಕೆ ನಿಟ್ಟುಸಿರು ಬಿಡುವೆ ಹೇಳು.
ಬಿದ್ದ ಮಳೆಗೆ ದಾರಿಯ ಧೂಳು ಒದ್ದೆಯಾಗಿದ್ದಕ್ಕೆ?
ಒಡೆದ ಹಿಮ್ಮಡಿ ನಿನ್ನ ಹೆಗಲ
ಸವೆಸಿದ್ದಕ್ಕೆ ಇಷ್ಟೊಂದು ಹಠವೇ?
ಮೊನ್ನೆ ಹಸಿರ್ಗಾಲದಲ್ಲಿ ಕಣ್ಬಿಟ್ಟ
ಬೇಲಿ ಹೂ ಮುಡಿವವರಿಲ್ಲದೆ ಮಡಿದು
ಅನಾಥವಾಯಿತೆಂದು ಕಣ್ಣೀರಿಡುತ್ತಿರುವೆಯಾ
ಅಥವ ಮಣ್ಣಲ್ಲಿ ಬಿದ್ದು ಹೊರಳಾಡಿದ
ಅದರ ಶವ ತುಳಿದುಬಿಟ್ಟೆನಲ್ಲ
ಎಂಬ ಪಶ್ಚಾತಾಪವೇ? ತಪ್ಪು ನಿನ್ನದಲ್ಲ ಬಿಡು.
ನೀನು ಯಾವ ಪ್ರಾಣಿಯ
ಚರ್ಮ? ಪಾಪ ನಿನಗೇನು ಗೊತ್ತು.
ಹೊದ್ದು ನಿನ್ನನ್ನು ತಿರುಗಾಡುತ್ತಿದ್ದ ಅದನ್ನು
ಕೊಂದು ನಿನಗೀರೂಪ ಕೊಟ್ಟರು ಈ ನಾಗರೀಕರು
ತಮ್ಮ ತೆವಲಿಗಾಗಿ.
ಮೈ ತುಂಬ ಮೊಳೆ ಜಡಿಸಿಕೊಂಡರೂ
ನೀನು ಮುಟ್ಟಾದ ಹೆಂಗಸಿನಂತಾದೆ ಎನ್ನುವ ಕೊರಗೆ?
ನಿನಗೆ ಮಾತು ಬರುವುದಿಲ್ಲ-ಅದು
ನಿನ್ನ ದುರ್ದೈವ; ಮೆಟ್ಟಿ ನುಗ್ಗುವವನ ಕಳ್ಳದಾರಿ,
ಸೂಳೆಗೇರಿ,ಮದ್ಯದಂಗಡಿಯ ಗಬ್ಬಿನಲ್ಲಿ
ಕಾದು ಕಾದು ನಿತ್ರಾಣಗೊಂಡ
ನೀನಿಂದು ವಿಶ್ರಾಂತಿ ಪಡೆಯುತ್ತಿರುವೆಯಾ
ಅಥವ ಪಾಳಿಯಿಲ್ಲದ ದುಡಿಮೆಗಾಗಿ
ಕೂಲಿ ಕೇಳಲು ಕಾದಿರುವೆಯಾ?
ಹೇಳು ಪಾದಗಳ ಪಲ್ಲಕ್ಕಿಯೇ.
ನೀನು ಚಪ್ಪಲಿಯೋ,ಚಕ್ಕಳವೋ,ಕಾಲದ ರುಜುವೋ?