ಏನಾದರೂ ನೋಡಲಿ
ಕತ್ತಲ ಸಂಧಿಸುವ ರಸಘಳಿಗೆ,ಸೂರ್ಯನ
ನಿದ್ರಾವಸ್ಥೆಯ ಅರೆಬೆತ್ತಲೆ
ನೋಡಲಿ ಬಿಡಿ.ಚರ್ಮದಿಂದೊಳದೂರಲಿ
ಕ್ಷ-ಕಿರಣ
ವಿಸ್ಮಯದ ವಿಕಿರಣ.ಮಂಜುಗಣ್ಣಿನ ಹೊರಪೊರೆ
ಸಂಜೆ ಬಾನಿನ ಬಣ್ಣದ ಮುಗಿಲು
ಸೌದೆ ಹೊರೆ ಹೊತ್ತ ಲಂಬಾಣಿ ಬೆಡಗಿಯ ಹಣೆಬೆವರು
ಮಿಲನದ ಏದುಸಿರು
ಕವನದ ತಂಬೆಲರು,
ನೋಡಲಿ ಬಿಡಿ ಬಸುರಿಯ ವೇದನೆ
ವಾಯ್ದೆ ಮೀರಿಯೂ ಬದುಕುಳಿದ ಕ್ಯಾನ್ಸರ್ ರೋಗಿಯ ನಿರುಮ್ಮಳತೆ.
ಬೆಳಕಿಗೂ ಕಣ್ಣುಗಳಿರಬಹುದು
ಎಲ್ಲಾದರೂ ಹರಿಯಲಿ
ಸುಳ್ಳನ ಇರಿಯುವ ಪಶ್ಚಾತಾಪ
ಕಳ್ಳನ ತುತ್ತಿನ ವ್ಯಂಗ್ಯ
ಪತ್ರೆ ಸೇದಿ ಮೂರ್ಛೆ ಹೋದ ಸಾಧುವಿನ ಸುಪ್ತ ಮನಸು,
ನೋಡಲಿ ಬಿಡಿ
ಸೂಳೆಯ ಸೆಂಟಿನ ಗುಟ್ಟು
ರಸಿಕನೊಬ್ಬನ ನೀರು ಬಿದ್ದ ಪ್ರೇಮಪತ್ರ
ತುಕ್ಕು ಹಿಡಿದ ವೀಣೆಯ ತಂತಿ
ಉಸಿರಾಡದ ಹಾರ್ಮೋನಿಯಂ
ಹೆಸರುಗೆಟ್ಟ ಸಾಧ್ವಿ ಹೆಂಗಸಿನ ಆತ್ಮಹತ್ಯೆ.
ಬೆಳಕಿಗೂ ಕಣ್ಣುಗಳಿರಬಹುದು
ಎಂದಾದರೂ ಮುಚ್ಚಲಿ
ಪ್ರವಾಹ ಉಕ್ಕಿದಾಗ
ಸಮುದ್ರ ಬತ್ತಿದಾಗ
ಕನಸು ಸತ್ತು ಕುರುಡಾಗಿ
ಕತ್ತಲ ಕಪಾಟಿನಲ್ಲಿ ಕಿರಣ ಕಾಲ್ಚಾಚಿದಾಗ.
ಮುಚ್ಚಲಿ ಬಿಡಿ ಹುಚ್ಚನ ಸ್ವಚ್ಚಂದ ನೋಟಕ್ಕೆ ಮಂಕು ಕವಿದು
ಕವಿಯ ಲೇಖನಿ ನಿದ್ರಿಸಿದಾಗ
ಯೋಧನ ಗುಂಡಿಗೆ ನಡುಗಿದಾಗ
ಸತ್ಯವಂತನಾಗಿ
ಕೋಗಿಲೆ ಸ್ವಂತ ಗೂಡು ಕಟ್ಟಿದಾಗ,ನೇಗಿಲು ಸವೆದು
ರಾಗಿ ನಿರ್ಜೀವಿಯಾದಾಗ
ಮುದುಕಿ ಮೈ ನೆರೆದಾಗ
ಗಾಂಧಿ ಮರೆತ ಭಾರತೀಯ ತ್ರಿವರ್ಣ ಧ್ವಜ ಹಾರಿಸಿದಾಗ !