ಭಾನುವಾರ, ನವೆಂಬರ್ 7, 2010

ಸ್ವಾಗತಗಾರ್ತಿ

ಬೆಳ್ಳಗಿದ್ದಳು
ಕುಳ್ಳಗಿದ್ದಳು
ಹುಳ್ಳನೆ ನಕ್ಕಿ ಸಿಕ್ಕಿಸುತ್ತಿದ್ದಳು
ಕಣ್ ಜೈಲ ಲಾಕಪ್ಪಿನಲ್ಲಿ
ಜಾಮಿನಿಲ್ಲದ ಮೇಕಪ್ಪಿನಲ್ಲಿ.


"ಸರ್ ಫ್ಯಾನ್ ಜರಾ ಕಮ್ ಕರೂ..." ಚೆಲ್ಲಿದಳು
ನುಡಿಮುತ್ತು.
ಕಂದು ಟಾಪಿನೊಳಗಿತ್ತು ಹಾಳೆ
ಹಾರೀತೆಂಬ ಕಾಳಜಿ.
ನಕ್ಕು ಸುಮ್ಮನಾದೆ.
ಹಾಡು
ಕಟ್ಟುತ್ತಿದ್ದೆ,ಜಾಹಿರಾತು
ಕಂಪನಿಯೊಂದಕ್ಕೆ ಹನ್ನೊಂದು ಆಟಗಾರರ
ತಂಡಕ್ಕೆ !

ಸ್ರವಿಸುತ್ತಿದ್ದಳು
ಹಿಂಗ್ಲೀ
ಜೇನ ತುಟಿಯಿಂದ
ಲಿಪ್ಸ್ಟಿಕ್ಕಿನೊಳಗಿಂದ "ಡೂ ಯೂ ವಾಂಟ್
ಟೀ,ಕಾಫಿ,ಬಿಸ್ಕೇಟ್
ಸಂಥಿಂಗ್ ಲೈಕ್ ದಟ್...?
ಮೀರಿಸಿತ್ತು ಕೇಳುವ ರೀತಿ ಅವೆಲ್ಲವನ್ನು
ಮಾತಿನ ವೇಗ ಶತಾಬ್ದಿ ಟ್ರೈನು
" ನೋ "
ಇಷ್ಟು ಹೇಳಿ ಸುಮ್ಮನಾಯ್ತು ಕವಿಮನಸು
ಹದಿವಯಸು !

"ಯುವರ್ ಗುಡ್ ನೇಮ್ ...? " ಕೇಳಿದಳು ಪುನಃ
"ಹೃದಯ ಶಿವ" ಉತ್ತರಿಸಿದೆ.
"ರ..ಡ..ಯ..ಶಿವ..."
ಉಚ್ಚರಿಸಿದ್ದಳು
ಕಂಗೆಡಿಸಿ ಕನ್ನಡ
ದಂಗಾದ ಕನ್ನಡಿಗ, ಗೀತೆ ಗೀಚುವ ಮಳ್ಳ ಹುಡುಗ !

" ಆಪ್ ಕಾ ಶಹರ್ ಕೌನ್ಸ ಹೈ
ಮುಜೆ ಕನ್ನಡ್ ಸಿಖಾವೋ
...........
ಕಂಪ್ಲೀಟೆಡ್ ಮೈ ಸಿ .ಎ."
ನಾನೋದಿದ್ದು ಬಿ.ಎ.
ಮನಸು ಹೇಳಿಕೊಂಡಿತು.

ಬರಕೊಟ್ಟೆ
ಅ ಆ ಇ ಈ ಉ ಊ
ಅಡಿಯಲ್ಲಿ ಹಿಂದಿ
ಅವಳೊಬ್ಬ ಸಿಂಧಿ,
ದೃಷ್ಟಿ ಅವಳತ್ತ ನೆಟ್ಟಿತ್ತು
ಅಷ್ಟರಲಿ ಹಾಡು ಸತ್ತಿತ್ತು !

ಅಯ್ಯಾ,ಅವಳು ಹೇಗಿದ್ದಾಳೆ?

ಕೆಟ್ಟವರ ಊರಿನಲ್ಲಿ ಒಬ್ಬ ಒಳ್ಳೆ ಮನುಷ್ಯನಿದ್ದ. ಅವನೇ ಪ್ರಸನ್ನ.ಆತನ ನಗುವ ಮೊಗ ಆಕಾಶದತ್ತ ತಿರುಗಿದಾಗ ಮುಗಿಲು ಮಳೆಯಾಗುತ್ತಿತ್ತು.ಮೊಲಗಳನ್ನು ಮಕ್ಕಳಂತೆ ಸಾಕುತ್ತಿದ್ದ.ಅವುಗಳ ಬಿಳಿ ತೊಗಲಿಗೆ ತನ್ನ ಬೆಳ್ಳಿ ಮನಸ ಸವರುತ್ತಿದ್ದ.ಇಬ್ಬನಿ ಕರಗಿದಾಗ ಹತಾಶನಾಗುತ್ತ ಗರಿಕೆಯ ನೇವರಿಸುತ್ತಿದ್ದ;ಚಂದಿರನ ಬೆಳಕ ಮೊಗೆಮೊಗೆದು ಹೀರಿ ಊರಿಗೆ ಚಾದರ ಹೊದಿಸುತ್ತಿದ್ದ.ಅವನ ಹೃದಯವಂತಿಕೆ ಕಂಡವರು ಅಸೂಯೆ ಪಡುತ್ತಿದ್ದರು.ಕಾರಣವಿಷ್ಟೇ ಅವನು ಯಾರಿಗೂ ಒಗ್ಗುವ ಗಿರಾಕಿಯಾಗಿರಲಿಲ್ಲ.

ಪ್ರೀತಿಯ ಹೆಸರಿನಲ್ಲಿ ಒಂದು ದಿವಸ ಹೃದಯ ಕಳೆದುಕೊಂಡು ಕನಸುಗಳ ಪಂಜರ ಸೇರಿದ.ನಟ್ಟಿರುಳ ತೂಗುಮಂಚದಲ್ಲಿ ಕುಳಿತು ಆಸೆಗಳ ನೇಯುವುದರಲ್ಲಿ ನಿರತನಾದ.ಅವನ ಪಾಲಿಗೆ ರಾತ್ರಿಯ ಮೌನ ಸೋಜಿಗದ ಸಂಗತಿ.ಕಡಲ ಮೊರೆತ ಯುಗಳಗೀತೆಯಾಗಿತ್ತು.ಅವನು ಕೆಲಸ ಮಾಡುತ್ತಿದ್ದ ಎಸ್ಟೇಟಿನ ಕಾವಲುಗಾರ ಇವನನ್ನೇ ದಿಟ್ಟಿಸುತ್ತಿದ್ದ. ಇವನು ಮಾತ್ರ ತನ್ನವಳ ಎಟುಕದ ಪ್ರೀತಿಯತ್ತ ಕೈಚಾಚಿ ಸುಸ್ತಾಗುತ್ತಿದ್ದ. ಹೇಳಿಕೊಳ್ಳಲಾಗದ ಬಡತನ ಪ್ರೀತಿಯ ಬಾಯಿಗೆ ಬೀಗ ಹಾಕಿತ್ತು.

ಇವನ ನಿದ್ರಾಹೀನ ರಾತ್ರಿಗಳು ಅವಳ ಕಿವಿಯಲ್ಲಿ ಮೌನರಾಗ ನುಡಿಸುವಷ್ಟರಲ್ಲಿ ಊರು ಬಿಟ್ಟಿದ್ದ.ಪ್ರೀತಿಯೇ ಶಾಪವಾಗಿ ಮಲೆನಾಡಿನ ಕಣಿವೆಯೊಂದರಲ್ಲಿ ಸಂತನಾಗತೊಡಗಿದ.ಆಲದ ಬಿಳಲುಗಳಲ್ಲಿ ತನ್ನ ಹೇಳದ ಅಳಲನ್ನು ಭೂಮಿಗಿಳಿಸುತ್ತಿದ್ದ.ದಾರಿ ತಪ್ಪಿದ ಪ್ರೇಮಿಯನ್ನು ರಕ್ಷಿಸಲು ಅಲ್ಲಿ ಯಾರೂ ಇರಲಿಲ್ಲ.ಚಿಟ್ಟೆಯ ರೆಕ್ಕೆಗಳಲ್ಲಿ ತನ್ನವಳ ಹೃದಯವನ್ನು ಅರಿಯಲು ಪ್ರಯತ್ನಿಸಿದ.ಆ ಇಂಗಿತ ನದಿಯ ಮುಗುಳುನಗೆಯಾಗಿತ್ತು.

ಪ್ರಸನ್ನ ಕ್ರಮೇಣ ಹುಣಸೇಮರದ ಮೇಲೊಂದು ಪುಟ್ಟ ಗುಡಿಸಲು ಕಟ್ಟಿ ಬದುಕತೊಡಗಿದ.ಕಾಡಾನೆಗಳು ಅವನನ್ನು ಮುಟ್ಟಲಾಗಲಿಲ್ಲ.ಕನಸುಗಳನ್ನಷ್ಟೇ ನಂಬಿಕೊಂಡಿದ್ದ ಅವನನ್ನು ನೋಡುತ್ತ ಜೋಡಿಜಿಂಕೆಗಳು ಹುಲ್ಲುಗಾವಲಿನಲ್ಲಿ ಸರಸವಾಡುತ್ತಿದ್ದವು.ಚಂದಿರನ ಬೆಳಕು ಅವನ ಗುಡಿಸಲ ತುಂಬಿದರೂ ಆತ ಮಾತ್ರ ವಿಚಲಿತನಾಗಲಿಲ್ಲ.ಈತ ಭೈರಾಗಿ ಆಗುತ್ತಿದ್ದಾನೆ,ಇಷ್ಟೇ ಇವನ ದಕ್ಕದ ಪ್ರೀತಿಗೆ ಸಿಕ್ಕಿದ ಪ್ರತಿಫಲ ಅಂದುಕೊಂಡು ಚಂದಿರ ಮೋಡ ಸೇರಿದ.ಪ್ರಸನ್ನ ಮಾತಾಡಲಿಲ್ಲ.ಕನಸುಗಳನ್ನು ಗುಣಿಸುತ್ತಲೇ ಇದ್ದ.

ತಿಂಗಳುಗಟ್ಟಲೆ ಕಾಡು ಸುತ್ತಿದರೂ ಕನಸು ಬತ್ತಲಿಲ್ಲ.ತನ್ನವಳು ಸಿಗುವುದಿಲ್ಲವೆಂದೂ ಖಾತ್ರಿಯಾಗತೊಡಗಿತು.ಗುಡಿಸಲಿನಲ್ಲಿ ಒಂದು ಗೆದ್ದಿಲು ಹುಳ,ಅದರ ಬಾಯಲ್ಲಿ ಗರಿಯ ತುಣುಕು ಇವನತ್ತ ನೋಡತೊಡಗಿತು.ಆಗಾಗ ಕೋಗಿಲೆ ಕಿರುಚುತ್ತದೆ.ಹೊರಗೆ ಇಣಕಿದಾಗ ಮಾವಿನೆಲೆ ನಗುತ್ತದೆ.ಕೂತು ಕೂತು ಬೆನ್ನು ಬಾತುಕೊಂಡಿತ್ತು.ಒಟ್ಟಾರೆ ಪ್ರಸನ್ನ ಪ್ರಸನ್ನನಾಗಿರಲಿಲ್ಲ.

ಅವತ್ತು ಭಾನುವಾರ ಗುಡಿಸಲಿನಿಂದಿಳಿದು ಮರದ ಬುಡದಲ್ಲಿ ನಿಂತು ದೂರದಲ್ಲಿ ಕರೆಯುತ್ತಿದ್ದ ಬೇಲದ ಹಣ್ಣು ನೋಡಿದ.ಹತ್ತಿರ ಹೋಗಿ ಹಣ್ಣನ್ನು ಚೆಚ್ಚುವಾಗ ಬೆರಳು ಸಿಕ್ಕಿಸಿಕೊಂಡು ಕಕ್ಕಾಬಿಕ್ಕಿಯಾದ.ನೆರೆಗಟ್ಟಿದ ಬೆರಳನ್ನೊಮ್ಮೆ ಚೀಪಿ ಕೊನೆಗೂ ಹಣ್ಣು ತಿಂದ.ಹಳ್ಳದಲ್ಲಿ ನೀರು ಕುಡಿಯಲು ಮುಂದಾದರೆ ನೀರು ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತಿರುವಂತೆ ಭಾಸವಾಗಿ ಗಾಬರಿಗೊಂಡ.ಇವನ ಕಂಗೆಟ್ಟ ಮನಸ್ಥಿತಿ ಅರಿತ ನೀರು ಮಾಮೂಲಿಯಂತೆಯೇ ಹರಿಯುತ್ತಿತ್ತು.ಪ್ರಸನ್ನ ಹೀಗೆಯೇ.ದುಂಬಿಗಳ ಗಾನದಲ್ಲಿ ಅಪಶೃತಿ ಹುಡುಕುತ್ತಿದ್ದ. ಕಾಡು ಅಪಹಾಸ್ಯ ಮಾಡಿತು.ಭಗ್ನಪ್ರೆಮಿಗೆ ಹುಚ್ಚನ ಪಟ್ಟ ಕೊಟ್ಟ ಖುಷಿಯಲ್ಲಿ ದೂರದ ಬೆಟ್ಟ ನಿಂತಿತ್ತು.ಗಾಳಿ ಬೆಟ್ಟದೆಡೆಗೆ ಬೀಸಿತು.ಪ್ರಸನ್ನನ ಚಿತ್ತವೂ.

ತುದಿಯಲ್ಲೊಬ್ಬ ಸಾಧು ತನ್ನ ಕೆಂಪು ಪಂಚೆಯ ಒಗೆದು ಬೇಲಿಯ ಮೇಲೆ ಹರಡುತ್ತಿದ್ದ.ಅಲ್ಲಿಗೆ ಬಂದ ಪ್ರಸನ್ನನನ್ನು ಕಂಡು ಅನಾಮತ್ತು ಕಾಲಿಗೆರಗಿದ ! ಇಬ್ಬರೂ ಒಟ್ಟಿಗೆ ಕುಳಿತು ಗಾಂಜಾ ಚಿಲುಮೆಗೆ ಬೆಂಕಿ ಸೋಕಿಸಿದರು.ಸಾಧು ಹಾರ್ಮೋನಿಯಂ ನುಡಿಸುತ್ತ ಶಿವಸ್ತುತಿ ಹಾಡಿದ,ಪ್ರಸನ್ನ ಸುಮ್ಮನಿದ್ದ.ಒಂದೇ ಒಂದು ಹಾಡನ್ನೂ ಹಾಡಲಿಲ್ಲ.ಕಾರಣವಿಷ್ಟೇ,ಪ್ರೇಮಗೀತೆ ಹಾಡುತ್ತಿದ್ದ ನಾಲಗೆಯಲ್ಲಿ ತತ್ವ ಜಿನುಗಲಿಲ್ಲ.ಸಾಧು ಭಕ್ತಿಪದ ಹಾಡಿ ಗಡ್ಡ ಸವರಿಕೊಂಡ.

ಮರುದಿನದ ಸೂರ್ಯ ಹುಟ್ಟುತ್ತಿದ್ದಂತೆಯೇ ಸಾಧು ಪ್ರಸನ್ನನ್ನು ಹುಡುಕುತ್ತಿದ್ದ.ಪ್ರಸನ್ನ ತಾವರೆ ಹೂವುಗಳೊಂದಿಗೆ ಕಷ್ಟ ಸುಖ ಮಾತಾಡುತ್ತಿದ್ದ.ಮಧ್ಯಾಹ್ನದ ಹೊತ್ತಿಗೆ ಸಾಧು ಸಿದ್ಧಪಡಿಸಿದ್ದ ಸೀಗೆಸೊಪ್ಪಿನ ಪಲ್ಯ,ಬಿದಿರು ಕರಳೆಯ ಸಾರು ನೆಂಚಿಕೊಂಡು ಒಂದು ತಪ್ಪಲೆ ಅನ್ನ ನುಂಗಿದ.ಮತ್ತದೇ ತಾವರೆ ಕೊಳದಲ್ಲಿ ನೀರು ಕುಡಿದು ತೇಗಿದ. ಪ್ರಸನ್ನನಿಗೆ ತತ್ವ ಬೇಕಿರಲಿಲ್ಲ.ಅವನೇ ತತ್ವವಾಗಿದ್ದ.ಸಾಕ್ಷಿಗೆ ಗಾಂಜಾ ಎಳೆದು ಹೊಗೆಯಲ್ಲಿ ಮಿನುಗುತ್ತಿದ್ದ.ಸಾಧು ಸುಮ್ಮನೆ ನೋಡುತ್ತಿದ್ದ.ಹತ್ತಿರ ಬಂದು ನಿಧಾನವಾಗಿ, "ಸ್ವಾಮೀ,ನೀವು ವಾರಣಾಸಿಯಿಂದ ಬಂದಿರಾ?" ಅಂದ.ಪ್ರಸನ್ನ ಸುರುಳಿ ಹೊಗೆಬಿಟ್ಟ.

ಇಬ್ಬರೂ ಜೊತೆಯಾಗಿ ಜಿಂಕೆವನಕ್ಕೆ ಹೊರಟರು.ಮುಳ್ಳು ಅವರ ಕಾಲುಗಳಲ್ಲಿ ರಕ್ತವಾಗಲಿಲ್ಲ.ಕಲ್ಲು ಕಾಲ್ಬೆರಳ ಬಾಧಿಸಲಿಲ್ಲ.ಪಯಣದ ಜೊತೆಜೊತೆಗೆ ಸಾಧು ಕೇಳಿದ,"ನಿಮ್ಮ ಮೌನದಲ್ಲಿ ಯಾವೊದೋ ಸಾಕ್ಷಾತ್ಕಾರದ ಕುರುಹು ಅಡಗಿದೆ,ನೀವು ಹಿಮಾಲಯದಲ್ಲಿ ಎಷ್ಟು ವರ್ಷ ಇದ್ದೀರಿ?".ಪ್ರಸನ್ನ ಮಾತಾಡಲಿಲ್ಲ.ಸಾಧು ಮತ್ತೊಮ್ಮೆ ಗಡ್ಡ ಸವರಿಕೊಂಡ.ಜಿಂಕೆವನ ಇನ್ನೇನು ಬಂತು ಅನ್ನುವಷ್ಟರಲ್ಲಿ ಪ್ರಸನ್ನ ದಾರಿ ಬದಲಿಸಿ ಕಣಿವೆಯತ್ತ ಹೆಜ್ಜೆ ಹಾಕಿದ.ಸಾಧು ಕೂಗಿದ.ಇವನು ಹಿಂದೆ ತಿರುಗಿ ನೋಡದೆಯೇ ಹೋದ.ಸಾಧು ಸ್ತಬ್ಧನಾದ.ಶಿವನ ರೂಪವೆಂಬ ಭ್ರಮೆಯಲ್ಲಿ ಅಲ್ಲಿಂದಲೇ ಕೈಮುಗಿದ.

ಇವನು ಕಣಿವೆ ದಾಟಿ ಹುಲ್ಲುಗಾವಲಿಗೆ ಬಂದ.ಬಾಯಾರಿಕೆಯಾಗಿತ್ತು.ಸುತ್ತ ನೋಡಿದ ಎಲ್ಲೂ ನೀರು ಕಾಣಲಿಲ್ಲ.ಚಿಲುಮೆ ಕೊರೆದ.ನೀರು ಬರಲಿಲ್ಲ,ಬದಲಾಗಿ ಮಣ್ಣಿನ ಮಡಕೆಯೊಂದು ಸಿಕ್ಕಿತು.ಅದರಲ್ಲಿ ಚಿನ್ನದ ನಾಣ್ಯಗಳಿದ್ದವು.ನಾಣ್ಯಗಳನ್ನು ಗುಂಡಿಗೆ ಸುರಿದು ಕಾಲಿನಿಂದ ಮಣ್ಣು ಮುಚ್ಚಿ ಕುಡಿಕೆ ಹಿಡಿದು ನೀರು ಹುಡುಕುತ್ತ ಹೊರಟ.ನೀರು ಎಲ್ಲೂ ಸಿಗಲಿಲ್ಲ.ಕಾಡು ನಕ್ಕ ಹಾಗನಿಸಿತು.ಇಳಿಸಂಜೆಯಲ್ಲೂ ಸೂರ್ಯ ಸುಡುತ್ತಿದ್ದಾನೆ ಅನ್ನಿಸಿತು.ಪ್ರಕೃತಿ ಕುತ್ತಿಗೆ ಹಿಸುಗಿದಂತಾಯಿತು.ಹದ್ದುಗಳು ತನ್ನ ಸಾವಿಗಾಗಿ ಕಾಯುತ್ತಿರುವುದಾಗಿ ಭಾಸವಾಯಿತು.ಒಡನೇ ಪ್ರಸನ್ನ ಬಾಯ್ದೆರೆದ.ನೀರಿಲ್ಲದ ಬಿಳಿ ಮುಗಿಲಿಗೆ ಹೇಳಿದ : "ನಾನು ಮುಖವೆತ್ತಿ ನೋಡಿದರೆ ನೀನು ಮಳೆಯಾಗುತ್ತಿದ್ದ ಕಾಲವೊಂದಿತ್ತು.ಅಂದು ನಿನ್ನ ಅವಶ್ಯಕತೆ ನನಗಿರಲಿಲ್ಲ.ಈಗ ನಿನ್ನ ಹನಿಯ ಅಗತ್ಯವಿದೆ.ನನ್ನನ್ನು ರೇಗಿಸಬೇಡ".ಅಂದು ಜೋರಾಗಿ ಕ್ಯಾಕರಿಸಿದ.

ಪ್ರಸನ್ನನ ಅಸಹಾಯಕತೆ ಕಂಡು ಬಿಳಿಮೋಡ ಪಥ ಬದಲಿಸಿತು.ಇವನ ಬಾಯಾರಿಕೆ ಇನ್ನಷ್ಟು ಹೆಚ್ಚಿತು.ಕೊನೆಗೂ ತನ್ನ ಗುಡಿಸಲು ಸೇರಿದ.ಅಷ್ಟರಲ್ಲಿ ಅರ್ಧ ಗುಡಿಸಲು ಗೆದ್ದಿಲು ಹುಳಗಳ ಆಹಾರವಾಗಿತ್ತು.ಬಿಗಿದಿದ್ದ ಬಿದಿರ ಗೋಳೆ ಉದುರುವ ಅಂಚಿನಲ್ಲಿತ್ತು.ತೆಪ್ಪಗಿದ್ದ.ಮನಸಿನ ನೋವನ್ನು ಸಮಾಧಾನದ ಮುಲಾಮು ಮುಚ್ಚಿತು.ಅಲ್ಲಿಂದಾಚೆಗೆ ಪ್ರಸನ್ನನ ಪಾಲಿಗೆ ಮನುಕುಲ ದೂರವೆನಿಸಿತು.ಹುಣಸೆಹಣ್ಣು ಕೂಡ ಅವನಿಗೆ ರುಚಿಸಲಿಲ್ಲ.ಗೆದ್ದಿಲ ಹುಳುಗಳು ಕಿವಿಯಲ್ಲಿ ನುಗ್ಗಿ ಮೂಗಿನಲ್ಲಿ ಬರಲಾರಂಭಿಸಿದವು.ಜಿಡ್ಡುಗಟ್ಟಿದ ತಲೆಯಲ್ಲಿ ಹೇನುಗಳು ಸಂಸಾರ ಹೂಡಿದ್ದವು.ಅವನ ಮಲಮೂತ್ರದ ನಾತಕ್ಕೆ ಮರದ ಹಕ್ಕಿಗಳು ಗೂಡು ಬಿಟ್ಟು ವಲಸೆ ಹೋಗಿದ್ದವು.ಅಷ್ಟು ಮಾತ್ರವಲ್ಲದೆ,ಮುರುಕು ಗುಡಿಸಲ ಸಂಧಿಯಿಂದ ಉರಿಬಿಸಿಲು ತಿವಿಯಲು ಶುರುವಿಕ್ಕಿಕೊಂಡಿತು.ಮಿಂಚು ಅವನ ಕಣ್ಣಿಗೆ ರಾಚುತ್ತಿತ್ತು.ಗುಡುಗು ಕಿವಿಗೆ ಗುದ್ದುತ್ತಿತ್ತು.ಗಡ್ಡ ಮೊಳದುದ್ದ ಬೆಳೆದಿತ್ತು.ಜುಟ್ಟು ತರಗೆಲೆಯಾಗಿತ್ತು.ಬಾಯಿ ಗಬ್ಬಾಗಿತ್ತು.ನೋಟ ಮಂಕಾಗಿತ್ತು.ಒಟ್ಟಾರೆ ಪ್ರಸನ್ನ ಅನಾಥನಾಗಿದ್ದ.ದನ ಕಾಯುವವರು ತಲೆಯೆತ್ತಿ ನೋಡುತ್ತಿರಲಿಲ್ಲ.ಆನೆಗಳು ಸೊಂಡಿಲು ಚಾಚುತ್ತಿರಲಿಲ್ಲ.ಜೋಡಿಜಿಂಕೆಗಳು ಕಣ್ಣಿಗೆ ಕಾಣುತ್ತಿರಲಿಲ್ಲ.ಸಾವು ಅವನ ಪಕ್ಕದಲ್ಲಿ ಎಚ್ಚರವಾಗಿತ್ತು.ಅವನು ಮಲಗಿದ್ದ.

ಒಂದು ದಿನ ಹುಣಸೆಹಣ್ಣು ಉದುರಿಸಲು ಬಂದ ಜನರು ಪ್ರಸನ್ನನನ್ನು ನೋಡಿ ಭಯಭೀತರಾದರು.ಅವರಾರಿಗೂ ಆತನ ಪರಿಚಯವಿರಲಿಲ್ಲ.ಬೆಳೆದ ಗಡ್ಡ,ಕೊಳಕು ಬಟ್ಟೆ ತೊಟ್ಟು ಗುಡಿಸಲಿನಲ್ಲಿ ನಿದ್ದೆ ಹೋಗಿದ್ದ ಪ್ರಸನ್ನನನ್ನು ಕಾಡು ಮನುಷ್ಯ ಅಂದುಕೊಂಡರು.ಕೋಲಿನಿಂದ ತಿವಿದು ಎಚ್ಚರಿಸಲೆತ್ನಿಸಿದರು.ನಿಧಾನವಾಗಿ ಕಣ್ಬಿಟ್ಟ ಪ್ರಸನ್ನ ಏನೂ ಮಾತಾಡದೆ ಮರದಿಂದಿಳಿದು ಕೆರಗಳನ್ನು ಕೈಯಲ್ಲಿ ಹಿಡಿದು, "ಅಯ್ಯಾ,ಅವಳು ಹೇಗಿದ್ದಾಳೆ?" ಅಂತ ತೊದಲಿಸಿದ.ಬಾಯಿಯ ಜೊಲ್ಲು ಗಡ್ಡಕ್ಕೆ ಅಂಟಿತ್ತು.