ಶನಿವಾರ, ಮೇ 21, 2011

ಬದುಕು ಹುಚ್ಚುಹೊಳೆಯು

ಬದುಕು ಹುಚ್ಚು ಹೊಳೆಯು
ಪ್ರೀತಿ ಸುಂದರ ಸುಳಿಯು
ಕನಸುಗಣ್ಣುಗಳಲ್ಲಿ ಉಪ್ಪು ಪನ್ನೀರು.
ಸಾವಿಗೆದುರಿನ ಯಾನ
ರೂಢಿಯಾಗಿಹುದಣ್ಣ
ಅವಳಿದ್ದ ಕಡೆಗಿರಲಿ ನಿತ್ಯ ಹೊಂದೇರು.

ಶವದ ಮೇಲಿನ ಹೂವು
ತರುವ ಪರಿಮಳ ಸೋಕೆ
ಎಂಥ ಮೈಲಿಗೆ ಹೇಳು ರುದ್ರ ಭೈರವಗೆ?
ಬೆಳ್ಳಿ ಬಟ್ಟಲಿನಲ್ಲಿ
ಕಳ್ಳಿ ಹಾಲನು ಕುಡಿಸಿ
ಹೋದ ಪ್ರೇಯಸಿ ಹೊಣೆಯೆ ಬೆಂದ ನನ್ನೆದೆಗೆ?

ನೀರು ಇಂಗದ ವಿನಃ
ತೀರ ಸೇರವು ಸನಿಹ
ಹಣ್ಣಾಗದಿರೆ ಹೆಣ್ಣು ಕಣ್ಣು ತೆರೆಯುವಳೆ?
ನೆತ್ತಿ ಮೇಲಿನ ಸಾಲು
ಉತ್ತರವ ಮರೆತಿರಲು
ಹೂತ ಭಾವನೆಗಳಿಗೆ ಎಲ್ಲಿ ಜೀವಕಳೆ?

ಗುರುವಾರ, ಮೇ 19, 2011

ಆದಿತ್ಯ ದರ್ಶನಂ

ಮುಗಿಲ ಗೋಪುರಗಳೆಡೆಯೊಳ್ ಥಳಥಳಿಸಿ ಮಿನುಗಿಸಿ ಅಗ್ನಿಜ್ವಾಲೆ
ಅದೆನಿತೆನಿತು ರೂಪಂಗಳೊoದಿಹೆ ಆವ ಉದರದೊಳು ಹುಟ್ಟಿ?
ಕ್ಷಣದೊಳ್ ಮುತ್ತಿಟ್ಟು ಹೊರಗಟ್ಟಿ ಧಗಧಗಿಪೆ ಹೇ ಜಗಜ್ಯೋತಿ
ಮುದ್ದಿಸಲಾಗಮಿಸಲೆನ್ನ ನೇತ್ರಗೊಂಬೆಯ ದಿಟ್ಟಿ !
ತುಸು ಸರಿದು ಮರೆಯಾಗಿ ಸರಿದೋಡಲು ಮುಗಿಲ ಸಾಲುಗಳ್
ರಸರೌದ್ರಗೆಂಡನಾದೊಡಮೇನ್
ದೆಸೆದೆಸೆಗಳ್ಗತ್ತಲೆಯನೆತ್ತಿ ನವಬೆಳಕ ಬೀರದಿರ್ದೊಡೆ ?
ಇಹುದೆನಗೆ ನಂಬುಗೆಯು ಆರೆಂಬುದು ನೀ-
ಭಾವಲೋಕದ ಭಾವಾಗ್ನಿಯೇ
ಬಾರೆನ್ನ ಮನದಿ ನೆಲೆಸು!

ಮಂಗಳವಾರ, ಮೇ 17, 2011

ಸಂಜೆಯಾಗುತಿದೆ

ಸಂಜೆಯಾಗುತಿದೆ ಹೊರಡು ಬೇಗನೆ
ಸಾಗಬೇಕು ದೂರ
ತವರು ಬೆಚ್ಚಗಿದೆ ಎಂದು ಕೂರದಿರು
ಸೇರಬೇಕು ಊರ

ಉಟ್ಟ ಸೀರೆಯಿದು ಒಪ್ಪುವಂತಿದೆ
ತೊಟ್ಟ ಬಳೆಯೆ ಸಾಕು
ಹೊತ್ತು ಮುಳುಗುತಿದೆ ಕತ್ತಲಾಗುತಿದೆ
ಬೆಟ್ಟ ಇಳಿಯಬೇಕು

ಬಿಸಿ ರವೆಯುಂಡೆ ಸಿಹಿ ಒಬ್ಬಟ್ಟು
ತುಪ್ಪ ಕರ್ಜಿಕಾಯಿ
ಹದವ ಮಾಡಿ ಕಟ್ಟಿಹಳು ಬುತ್ತಿ
ಪ್ರೀತಿ ಬೆರೆಸಿ ತಾಯಿ

ಹುಟ್ಟಿದಮನೆ ಅಲ್ಲ ಶಾಶ್ವತ
ಪತಿಯೆ ಸತಿಗೆ ಸೂರು
ಕೈಯ ಹಿಡಿದವನ ಬಾಳ ಜಾತ್ರೆಯಲಿ
ಮಡದಿ ತಾನೆ ತೇರು

ಮಂಗಳವಾರ, ಏಪ್ರಿಲ್ 26, 2011

ತ್ವರೆ ಮಾಡಿ

ಹುಟ್ಟು ಸಾವು
ಸೃಷ್ಟಿ ಲಯ
ಉದಯ ಅಸ್ತ -
ಇವುಗಳ ನಡುವೆ
ನಾನು ಮತ್ತು ಬದುಕು
ಪ್ರಶ್ನೆಗಳ
ಪಾತಾಳಕ್ಕಿಳಿದು
ಅಕ್ಷರಶಃ ಕಳೆದುಹೊಗಿದ್ದೇವೆ.
ಹುಡುಕಿ ಕೊಟ್ಟವರಿಗೆ
ನಮ್ಮಿಬ್ಬರನ್ನು
ಉಚಿತವಾಗಿ ಕೊಡಲಾಗುವುದು!

ಸೋಮವಾರ, ಏಪ್ರಿಲ್ 25, 2011

ಅವ್ವನಿಗೊಂದು ಜೋಗುಳ

ಹಾಸಿಗೆ ಹಾಸಿವ್ನಿ ಬೀಸಣಿಗೆ ತಂದಿವ್ನಿ
ಕೂಸಂಗೆ ಮಲಗು ಕಣ್ಮುಚ್ಚಿ /ನನ್ನವ್ವ
ಬ್ಯಾಸರಕೀ ನನ್ನ ಪದ ಕೇಳು //

ಗಂಭೀರದಲಿ ಆನೆ ಅಂಬಾರಿ ಹೊರುವಂಗೆ
ಒಂಭತ್ತು ತಿಂಗಾಳು ಹೊತ್ತೆನ್ನ /ತಿರುಗಾಡಿ
ತುಂಬಿದೂರಿಗೆ ತಂದು ನೀ ಬಿಟ್ಟೆ //

ನೆತ್ತಿ ಸುಡೊ ಬಿಸಿಲಾಗೆ ಸುತ್ತಿ ಸೆರಗ ತಲೆಗೆ
ಹೊತ್ತಾರಿಂದ ಸಂಜೆ ತನಕ /ನೀ ದುಡಿದು
ತುತ್ತುಣಿಸಿ ಮಲಗಿದೆ ನೀ ಹಸಿದು //

ಪೋಲಿ ಹೈಕಳ ಸಂಗ ಗೋಲಿ ಗೆಜ್ಜುಗ ಹಿಡಿದ
ಚಾಳಿಯ ಬಿಡಿಸಿ ಬುದ್ವಾದ /ನೀ ಹೇಳಿ
ಶಾಲೆಗಾಕಿ ಬೆಳಕ ತೋರಿಸಿದೆ //

ರೆಕ್ಕೆ ಬಲಿತ ಹಕ್ಕಿ ಸೊಕ್ಕಿ ಹಾರೋವಂಗೆ
ದಿಕ್ಕೆಟ್ಟು ಸುತ್ತಿ ಪರಪಂಚ /ಬಂದಿವ್ನಿ
ಮುಕ್ಕಾಗದ ಪ್ರೀತಿ ನಿನದೊಂದೆ //

ಮಂಗಳವಾರ, ಫೆಬ್ರವರಿ 15, 2011

ಪ್ರೀತಿ ಇಲ್ಲದೆ ಬದುಕು ಎಲ್ಲಿದೆ

ಕಣ್ಣೀರಿಗೂ ಈ ಪ್ರೀತಿಗೂ ಬಿಡಿಸದಂತ ಋಣ
ಒಂದೇ ಸಮ ಗೋಳಾಡಿದೆ ಕಂಗಾಲಾಗಿ ಮನ
ಅದೇ ಕಿಚ್ಚು ಪದೇ ಪದೇ ಎದೆ ಸುಡುತಲಿದೆ
ಪ್ರತಿ ಸ್ವರ ಶೃತಿ ಮರೆತಿದೆ
ಪ್ರೀತಿ ಇಲ್ಲದೆ ಬದುಕು ಎಲ್ಲಿದೆ
ಪ್ರೀತಿ ಇಲ್ಲದೆ ಬದುಕು ಎಲ್ಲಿದೆ

ಕಣ್ಣ
ಬಿಂದು ನಿನ್ನ ಬಂಧು ದೂರಬೇಡ ಯಾರನು
ಹಣೆಯ ಮೇಲೆ ಬರೆದ ಸಾಲು ಅಳಿಸಲಾರ ಬ್ರಹ್ಮನು
ಒಲಿದ ಮನಸು ತಿಳಿದು ತಿಳಿದು ತೊರೆದರೇನು ನಿನ್ನನು
ಒಡೆದ ಕನ್ನಡಿಯಲಿ ಮುಖವ ನೋಡುವವನು ಮೂಢನು
ಪ್ರೀತಿ ಇಲ್ಲದೆ ಬದುಕು ಎಲ್ಲಿದೆ
ಪ್ರೀತಿ ಇಲ್ಲದೆ ಬದುಕು ಎಲ್ಲಿದೆ

ಉರಿಯುವ ಮುನ್ನ ಒಂಟಿದೀಪ ಗಾಳಿಪಾಲು ಎಲ್ಲಿ ಬೆಳಕು
ಅರಳುವ ಮುನ್ನ ಪ್ರೀತಿ ಹೂವು ಮಣ್ಣುಪಾಲು ಎಲ್ಲಿ ಬದುಕು
ಬದುಕಿನ ಪ್ರಯಾಣಕೆ ಬಗೆಬಗೆ ತಿರುವಿದೆ
ಒಲವಿನ ಸಮಾಧಿಗೆ ಅವಳದೆ ಹೆಸರಿದೆ
ವ್ಯಥೆ ನನ್ನ ಜೊತೆ ಸಾಗಿದೆ
ಪ್ರೀತಿ ಇಲ್ಲದೆ ಬದುಕು ಎಲ್ಲಿದೆ
ಪ್ರೀತಿ ಇಲ್ಲದೆ ಬದುಕು ಎಲ್ಲಿದೆ

ಕೊಳಲನಾದ ಎಂದು ಕೂಡ ಕೊಳಲ ಸ್ವತ್ತು ಆಗದು
ಕರಗಿ ಹೋದ ಹಿಮವ ನೆನೆದು ಗರಿಕೆ ಸೊರಗಬಾರದು
ಗೂಡು ಮರೆತು ಹೋದ ಹಕ್ಕಿ ಮರಳಿ ತವರ ಬಯಸದು
ಕಾಲದೆದುರು ವಾದಕಿಳಿದು ಮೂರ್ಖರಾಗಬಾರದು
ಪ್ರೀತಿ ಇಲ್ಲದೆ ಬದುಕು ಎಲ್ಲಿದೆ
ಪ್ರೀತಿ ಇಲ್ಲದೆ ಬದುಕು ಎಲ್ಲಿದೆ

ಮೊದಲನೆ ಹೆಜ್ಜೆಯಲ್ಲೆ ಯಾತ್ರೆ ಮುಗಿದು ಹೋದ್ರೆ ಮುಂದೆ ಏನು
ರಥವಿರದೇನೆ ಬಾಳಜಾತ್ರೆ ನಡೆದು ಹೋದ್ರೆ ಪಾಪಿ ನೀನು
ದೇವರ ತಮಾಷೆಗೆ ಬಲಿಪಶು ಮಾನವ
ಕಂಬನಿ ಪ್ರವಾಹದಿ ಮುಳುಗಿದೆ ವಾಸ್ತವ
ಭ್ರಮೆ ನನ್ನ ಕ್ಷಮೆ ಕೇಳಿದೆ
ಪ್ರೀತಿ ಇಲ್ಲದೆ ಬದುಕು ಎಲ್ಲಿದೆ
ಪ್ರೀತಿ ಇಲ್ಲದೆ ಬದುಕು ಎಲ್ಲಿದೆ



ಶುಕ್ರವಾರ, ಫೆಬ್ರವರಿ 4, 2011

ನನ್ನ ಹಾಡು ನನ್ನದಲ್ಲ

ಹೆಣ್ಣಿನಿಂದ ಜನ್ಮ ಪಡೆದು
ಮಣ್ಣಿನಿಂದ ಅನ್ನ ಬಗೆದು
ಹೊನ್ನ ಗಳಿಸಿ ತನ್ನ ತೊರೆದು
ಬಣ್ಣದ ಮುಖವಾಡ ತೊಟ್ಟ ಅಣ್ಣಗಳಿರ ಕೇಳಿರಿ
ನನ್ನ ಹಾಡು ನನ್ನದಲ್ಲ ನಿಮ್ಮದೆಂದು ಹಾಡಿರಿ

ಹಡೆದವ್ವ ನಡೆವ ಘಳಿಗೆ
ಹಿಡಿ ಅನ್ನವ ಕೊಡದೆ ಕಡೆಗೆ
ಸುಡುಗಾಡಿನ ಕುಡಿ ದೀಪಗೆ
ವಡೆ ಮಾಡಿ ಎಡೆ ಇಡುವ ತಮ್ಮಗಳಿರ ಕೇಳಿರಿ
ನನ್ನ ಹಾಡು ನನ್ನದಲ್ಲ ನಿಮ್ಮದೆಂದು ಹಾಡಿರಿ

ಬಲ್ಲೆನೆಂಬ ಸುಳ್ಳು ಭ್ರಮೆಯ
ಕಳ್ಳ ಚೇಳು ಹೊಕ್ಕಿ ಹೃದಯ
ಮುಳ್ಳ ಚುಚ್ಚಿ ಕೊಲ್ಲೊ ವಿಷಯ
ಎಳ್ಳಿನಷ್ಟು ತಿಳಿಯದಂಥ ಅಯ್ಯಗಳಿರ ಕೇಳಿರಿ
ನನ್ನ ಹಾಡು ನನ್ನದಲ್ಲ ನಿಮ್ಮದೆಂದು ಹಾಡಿರಿ