ಮಂಗಳವಾರ, ಏಪ್ರಿಲ್ 26, 2011

ತ್ವರೆ ಮಾಡಿ

ಹುಟ್ಟು ಸಾವು
ಸೃಷ್ಟಿ ಲಯ
ಉದಯ ಅಸ್ತ -
ಇವುಗಳ ನಡುವೆ
ನಾನು ಮತ್ತು ಬದುಕು
ಪ್ರಶ್ನೆಗಳ
ಪಾತಾಳಕ್ಕಿಳಿದು
ಅಕ್ಷರಶಃ ಕಳೆದುಹೊಗಿದ್ದೇವೆ.
ಹುಡುಕಿ ಕೊಟ್ಟವರಿಗೆ
ನಮ್ಮಿಬ್ಬರನ್ನು
ಉಚಿತವಾಗಿ ಕೊಡಲಾಗುವುದು!

ಸೋಮವಾರ, ಏಪ್ರಿಲ್ 25, 2011

ಅವ್ವನಿಗೊಂದು ಜೋಗುಳ

ಹಾಸಿಗೆ ಹಾಸಿವ್ನಿ ಬೀಸಣಿಗೆ ತಂದಿವ್ನಿ
ಕೂಸಂಗೆ ಮಲಗು ಕಣ್ಮುಚ್ಚಿ /ನನ್ನವ್ವ
ಬ್ಯಾಸರಕೀ ನನ್ನ ಪದ ಕೇಳು //

ಗಂಭೀರದಲಿ ಆನೆ ಅಂಬಾರಿ ಹೊರುವಂಗೆ
ಒಂಭತ್ತು ತಿಂಗಾಳು ಹೊತ್ತೆನ್ನ /ತಿರುಗಾಡಿ
ತುಂಬಿದೂರಿಗೆ ತಂದು ನೀ ಬಿಟ್ಟೆ //

ನೆತ್ತಿ ಸುಡೊ ಬಿಸಿಲಾಗೆ ಸುತ್ತಿ ಸೆರಗ ತಲೆಗೆ
ಹೊತ್ತಾರಿಂದ ಸಂಜೆ ತನಕ /ನೀ ದುಡಿದು
ತುತ್ತುಣಿಸಿ ಮಲಗಿದೆ ನೀ ಹಸಿದು //

ಪೋಲಿ ಹೈಕಳ ಸಂಗ ಗೋಲಿ ಗೆಜ್ಜುಗ ಹಿಡಿದ
ಚಾಳಿಯ ಬಿಡಿಸಿ ಬುದ್ವಾದ /ನೀ ಹೇಳಿ
ಶಾಲೆಗಾಕಿ ಬೆಳಕ ತೋರಿಸಿದೆ //

ರೆಕ್ಕೆ ಬಲಿತ ಹಕ್ಕಿ ಸೊಕ್ಕಿ ಹಾರೋವಂಗೆ
ದಿಕ್ಕೆಟ್ಟು ಸುತ್ತಿ ಪರಪಂಚ /ಬಂದಿವ್ನಿ
ಮುಕ್ಕಾಗದ ಪ್ರೀತಿ ನಿನದೊಂದೆ //

ಮಂಗಳವಾರ, ಫೆಬ್ರವರಿ 15, 2011

ಪ್ರೀತಿ ಇಲ್ಲದೆ ಬದುಕು ಎಲ್ಲಿದೆ

ಕಣ್ಣೀರಿಗೂ ಈ ಪ್ರೀತಿಗೂ ಬಿಡಿಸದಂತ ಋಣ
ಒಂದೇ ಸಮ ಗೋಳಾಡಿದೆ ಕಂಗಾಲಾಗಿ ಮನ
ಅದೇ ಕಿಚ್ಚು ಪದೇ ಪದೇ ಎದೆ ಸುಡುತಲಿದೆ
ಪ್ರತಿ ಸ್ವರ ಶೃತಿ ಮರೆತಿದೆ
ಪ್ರೀತಿ ಇಲ್ಲದೆ ಬದುಕು ಎಲ್ಲಿದೆ
ಪ್ರೀತಿ ಇಲ್ಲದೆ ಬದುಕು ಎಲ್ಲಿದೆ

ಕಣ್ಣ
ಬಿಂದು ನಿನ್ನ ಬಂಧು ದೂರಬೇಡ ಯಾರನು
ಹಣೆಯ ಮೇಲೆ ಬರೆದ ಸಾಲು ಅಳಿಸಲಾರ ಬ್ರಹ್ಮನು
ಒಲಿದ ಮನಸು ತಿಳಿದು ತಿಳಿದು ತೊರೆದರೇನು ನಿನ್ನನು
ಒಡೆದ ಕನ್ನಡಿಯಲಿ ಮುಖವ ನೋಡುವವನು ಮೂಢನು
ಪ್ರೀತಿ ಇಲ್ಲದೆ ಬದುಕು ಎಲ್ಲಿದೆ
ಪ್ರೀತಿ ಇಲ್ಲದೆ ಬದುಕು ಎಲ್ಲಿದೆ

ಉರಿಯುವ ಮುನ್ನ ಒಂಟಿದೀಪ ಗಾಳಿಪಾಲು ಎಲ್ಲಿ ಬೆಳಕು
ಅರಳುವ ಮುನ್ನ ಪ್ರೀತಿ ಹೂವು ಮಣ್ಣುಪಾಲು ಎಲ್ಲಿ ಬದುಕು
ಬದುಕಿನ ಪ್ರಯಾಣಕೆ ಬಗೆಬಗೆ ತಿರುವಿದೆ
ಒಲವಿನ ಸಮಾಧಿಗೆ ಅವಳದೆ ಹೆಸರಿದೆ
ವ್ಯಥೆ ನನ್ನ ಜೊತೆ ಸಾಗಿದೆ
ಪ್ರೀತಿ ಇಲ್ಲದೆ ಬದುಕು ಎಲ್ಲಿದೆ
ಪ್ರೀತಿ ಇಲ್ಲದೆ ಬದುಕು ಎಲ್ಲಿದೆ

ಕೊಳಲನಾದ ಎಂದು ಕೂಡ ಕೊಳಲ ಸ್ವತ್ತು ಆಗದು
ಕರಗಿ ಹೋದ ಹಿಮವ ನೆನೆದು ಗರಿಕೆ ಸೊರಗಬಾರದು
ಗೂಡು ಮರೆತು ಹೋದ ಹಕ್ಕಿ ಮರಳಿ ತವರ ಬಯಸದು
ಕಾಲದೆದುರು ವಾದಕಿಳಿದು ಮೂರ್ಖರಾಗಬಾರದು
ಪ್ರೀತಿ ಇಲ್ಲದೆ ಬದುಕು ಎಲ್ಲಿದೆ
ಪ್ರೀತಿ ಇಲ್ಲದೆ ಬದುಕು ಎಲ್ಲಿದೆ

ಮೊದಲನೆ ಹೆಜ್ಜೆಯಲ್ಲೆ ಯಾತ್ರೆ ಮುಗಿದು ಹೋದ್ರೆ ಮುಂದೆ ಏನು
ರಥವಿರದೇನೆ ಬಾಳಜಾತ್ರೆ ನಡೆದು ಹೋದ್ರೆ ಪಾಪಿ ನೀನು
ದೇವರ ತಮಾಷೆಗೆ ಬಲಿಪಶು ಮಾನವ
ಕಂಬನಿ ಪ್ರವಾಹದಿ ಮುಳುಗಿದೆ ವಾಸ್ತವ
ಭ್ರಮೆ ನನ್ನ ಕ್ಷಮೆ ಕೇಳಿದೆ
ಪ್ರೀತಿ ಇಲ್ಲದೆ ಬದುಕು ಎಲ್ಲಿದೆ
ಪ್ರೀತಿ ಇಲ್ಲದೆ ಬದುಕು ಎಲ್ಲಿದೆ



ಶುಕ್ರವಾರ, ಫೆಬ್ರವರಿ 4, 2011

ನನ್ನ ಹಾಡು ನನ್ನದಲ್ಲ

ಹೆಣ್ಣಿನಿಂದ ಜನ್ಮ ಪಡೆದು
ಮಣ್ಣಿನಿಂದ ಅನ್ನ ಬಗೆದು
ಹೊನ್ನ ಗಳಿಸಿ ತನ್ನ ತೊರೆದು
ಬಣ್ಣದ ಮುಖವಾಡ ತೊಟ್ಟ ಅಣ್ಣಗಳಿರ ಕೇಳಿರಿ
ನನ್ನ ಹಾಡು ನನ್ನದಲ್ಲ ನಿಮ್ಮದೆಂದು ಹಾಡಿರಿ

ಹಡೆದವ್ವ ನಡೆವ ಘಳಿಗೆ
ಹಿಡಿ ಅನ್ನವ ಕೊಡದೆ ಕಡೆಗೆ
ಸುಡುಗಾಡಿನ ಕುಡಿ ದೀಪಗೆ
ವಡೆ ಮಾಡಿ ಎಡೆ ಇಡುವ ತಮ್ಮಗಳಿರ ಕೇಳಿರಿ
ನನ್ನ ಹಾಡು ನನ್ನದಲ್ಲ ನಿಮ್ಮದೆಂದು ಹಾಡಿರಿ

ಬಲ್ಲೆನೆಂಬ ಸುಳ್ಳು ಭ್ರಮೆಯ
ಕಳ್ಳ ಚೇಳು ಹೊಕ್ಕಿ ಹೃದಯ
ಮುಳ್ಳ ಚುಚ್ಚಿ ಕೊಲ್ಲೊ ವಿಷಯ
ಎಳ್ಳಿನಷ್ಟು ತಿಳಿಯದಂಥ ಅಯ್ಯಗಳಿರ ಕೇಳಿರಿ
ನನ್ನ ಹಾಡು ನನ್ನದಲ್ಲ ನಿಮ್ಮದೆಂದು ಹಾಡಿರಿ

ಬುಧವಾರ, ಫೆಬ್ರವರಿ 2, 2011

ನಲ್ಲಿಯ ದಾಹ

ಜಿನುಗದ ಹನಿಯ ಉಪಕಾರ ಸ್ಮರಿಸಿ
ಪುನರುತ್ಥಾನದ ತುಡಿತದಲ್ಲಿದೆ
ಬಾಯ್ತುಂಬ ಬಲೆಯೆಣೆದ ಜೇಡ.

ಬೆಂಕಿಮುಖಿಯಾಗಿ
ಪ್ರಸವದ ಸಿದ್ಧತೆಯಲ್ಲಿದೆ
ಪುಟಿವ ಹಠ ಬಿಟ್ಟ ನೆಲದಾಳದುದಕ.

ಸಂಪಿಗೆಯ ಮೂಗುರಿಸಿ
ಬೆಟ್ಟದ ಹುಲ್ಲಿಗೆ ಬೆರಳ ಸೋಕಿಸುತಿದೆ
ಅಪರಾಹ್ನದ ಅಪರಿಚಿತ ಬಿಸಿಗಾಳಿ.

ಹಿತ್ತಿಲ
ಸೀಬೆ ಗಿಡದಡಿ
ಬಕ್ಕರೆಯ ಚೂರುಗಳಾಗಿ ಬಿದ್ದಿದೆ
ಬಾಯಾರಿ ಬಲಿಯಾದ
ಸೂತಕದ ಮಡಿಕೆ.

ಇಂದು ನಲ್ಲಿಗೆ ದಾಹ.

ಶನಿವಾರ, ಜನವರಿ 22, 2011

ಬೆಳಕಿಗೂ ಕಣ್ಣುಗಳಿರಬಹುದು

ಬೆಳಕಿಗೂ ಕಣ್ಣುಗಳಿರಬಹುದು
ಏನಾದರೂ ನೋಡಲಿ
ಕತ್ತಲ ಸಂಧಿಸುವ ರಸಘಳಿಗೆ,ಸೂರ್ಯನ
ನಿದ್ರಾವಸ್ಥೆಯ ಅರೆಬೆತ್ತಲೆ
ನೋಡಲಿ ಬಿಡಿ.ಚರ್ಮದಿಂದೊಳದೂರಲಿ
ಕ್ಷ-ಕಿರಣ
ವಿಸ್ಮಯದ ವಿಕಿರಣ.ಮಂಜುಗಣ್ಣಿನ ಹೊರಪೊರೆ
ಸಂಜೆ ಬಾನಿನ ಬಣ್ಣದ ಮುಗಿಲು
ಸೌದೆ ಹೊರೆ ಹೊತ್ತ ಲಂಬಾಣಿ ಬೆಡಗಿಯ ಹಣೆಬೆವರು
ಮಿಲನದ ಏದುಸಿರು
ಕವನದ ತಂಬೆಲರು,
ನೋಡಲಿ ಬಿಡಿ ಬಸುರಿಯ ವೇದನೆ
ವಾಯ್ದೆ ಮೀರಿಯೂ ಬದುಕುಳಿದ ಕ್ಯಾನ್ಸರ್ ರೋಗಿಯ ನಿರುಮ್ಮಳತೆ.

ಬೆಳಕಿಗೂ ಕಣ್ಣುಗಳಿರಬಹುದು
ಎಲ್ಲಾದರೂ ಹರಿಯಲಿ
ಸುಳ್ಳನ ಇರಿಯುವ ಪಶ್ಚಾತಾಪ
ಕಳ್ಳನ ತುತ್ತಿನ ವ್ಯಂಗ್ಯ
ಪತ್ರೆ ಸೇದಿ ಮೂರ್ಛೆ ಹೋದ ಸಾಧುವಿನ ಸುಪ್ತ ಮನಸು,
ನೋಡಲಿ ಬಿಡಿ
ಸೂಳೆಯ ಸೆಂಟಿನ ಗುಟ್ಟು
ರಸಿಕನೊಬ್ಬನ ನೀರು ಬಿದ್ದ ಪ್ರೇಮಪತ್ರ
ತುಕ್ಕು ಹಿಡಿದ ವೀಣೆಯ ತಂತಿ
ಉಸಿರಾಡದ ಹಾರ್ಮೋನಿಯಂ
ಹೆಸರುಗೆಟ್ಟ ಸಾಧ್ವಿ ಹೆಂಗಸಿನ ಆತ್ಮಹತ್ಯೆ.

ಬೆಳಕಿಗೂ ಕಣ್ಣುಗಳಿರಬಹುದು
ಎಂದಾದರೂ ಮುಚ್ಚಲಿ
ಪ್ರವಾಹ ಉಕ್ಕಿದಾಗ
ಸಮುದ್ರ ಬತ್ತಿದಾಗ
ಕನಸು ಸತ್ತು ಕುರುಡಾಗಿ
ಕತ್ತಲ ಕಪಾಟಿನಲ್ಲಿ ಕಿರಣ ಕಾಲ್ಚಾಚಿದಾಗ.
ಮುಚ್ಚಲಿ ಬಿಡಿ ಹುಚ್ಚನ ಸ್ವಚ್ಚಂದ ನೋಟಕ್ಕೆ ಮಂಕು ಕವಿದು
ಕವಿಯ ಲೇಖನಿ ನಿದ್ರಿಸಿದಾಗ
ಯೋಧನ ಗುಂಡಿಗೆ ನಡುಗಿದಾಗ
ಸತ್ಯವಂತನಾಗಿ
ಕೋಗಿಲೆ ಸ್ವಂತ ಗೂಡು ಕಟ್ಟಿದಾಗ,ನೇಗಿಲು ಸವೆದು
ರಾಗಿ ನಿರ್ಜೀವಿಯಾದಾಗ
ಮುದುಕಿ ಮೈ ನೆರೆದಾಗ
ಗಾಂಧಿ ಮರೆತ ಭಾರತೀಯ ತ್ರಿವರ್ಣ ಧ್ವಜ ಹಾರಿಸಿದಾಗ !

ಬುಧವಾರ, ಡಿಸೆಂಬರ್ 29, 2010

ಏಕಾಂತ

ಸೂರ್ಯ ಹೋದ ಚಂದ್ರ ಬಂದ
ನೆನಪು ಕಣ್ಣ ತೆರೆದಿದೆ
ಗೆಳತಿ ನಿನ್ನ ಸನಿಹ ಸಿಗದೆ
ಹೃದಯ ಒಂಟಿಯಾಗಿದೆ

ರೆಪ್ಪೆ ಮುಚ್ಚಿಕೊಂಡರೂನು
ನಿದಿರೆ ವಲಸೆ ಹೋಗಿದೆ
ಕನಸುಗಳನು ಹೆಕ್ಕಿ ತರಲು
ಮನಸು ಹಠವ ಮಾಡಿದೆ

ಅಂದು ನಾನು ನೀನು ಕಳೆದ
ಸಂಜೆ ಮರಳಿ ಕಾಡಿದೆ
ಕಡಲ ತಡಿಯ ಅಲೆಯ ಸ್ಪರ್ಶ
ಇನ್ನು ಹಾಗೆ ಉಳಿದಿದೆ

ಇರುಳ ಮುಗಿಲ ಹೆರಳಿನಲ್ಲಿ
ನಿನ್ನ ಬೈತಲೆ ಇದೆ
ಕೊರೆವ ಚಳಿಯ ತಂಪಿನ ಕ್ಷಣ
ಮಡಿಲ ಬಿಸಿಯು ಬೇಕಿದೆ

ನಸುಕು ಇಣಕುತಿರಲು ನನ್ನ
ನಿಶೆಯು ಕಳೆದು ಹೋಗಿದೆ
ಹುಡುಗಿ ನೀನು ಇರುವ ಕಡೆಯೆ
ಹೊಸತು ಹಗಲು ಜನಿಸಿದೆ